ಮಂಗಳೂರು : ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಯುದ್ಧದ ಸನ್ನಿವೇಶ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ತೈಲ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದೆ. ಇದರ ನೇರ ಪರಿಣಾಮ ರಾಜ್ಯದ ಏಕೈಕ ತೈಲ ಸಂಸ್ಕರಣಾಗಾರವಾದ ಮಂಗಳೂರಿನ ಎಂಆರ್ಪಿಎಲ್ ಮೇಲೆಯೂ ಉಂಟಾಗಿದ್ದು, ಸಂಸ್ಥೆಯಲ್ಲಿ ಸ್ವಲ್ಪ ಮಟ್ಟಿನ ಕಳವಳ ವ್ಯಕ್ತವಾಗಿದೆ. ಯುದ್ಧ ಸನ್ನಿವೇಶವು ಇನ್ನೂ ಒಂದು ತಿಂಗಳ ಕಾಲ ಮುಂದುವರಿಯಬಹುದು ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯು ಕಚ್ಚಾ ತೈಲ ಪೂರೈಕೆಯ ಸರಪಳಿಗೆ ಅಡ್ಡಿಯಾಗುವ ಭೀತಿಯನ್ನು ಹೆಚ್ಚಿಸಿದೆ.
ಸದ್ಯದ ಮಾಹಿತಿ ಪ್ರಕಾರ, ಎಂಆರ್ಪಿಎಲ್ನಲ್ಲಿ ಸುಮಾರು 10 ದಿನಗಳ ಕಾಲ ಸಂಸ್ಕರಣೆಗೆ ಬೇಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಲಭ್ಯವಿದೆ. ಇದರ ಜೊತೆಗೆ ಪೆರ್ಮುದೆಯಲ್ಲಿರುವ ಐಎಸ್ಪಿಆರ್ಎಲ್ನ ಭೂಗತ ತೈಲಾಗಾರದಲ್ಲಿ ಸುಮಾರು 53 ಸಾವಿರ ಮೆಟ್ರಿಕ್ ಟನ್ನಷ್ಟು ಕಚ್ಚಾ ತೈಲ ಸಂಗ್ರಹವಿರುವುದು ಸದ್ಯಕ್ಕೆ ಸಮಾಧಾನಕರ ಸಂಗತಿಯಾಗಿದೆ. ಭಾರತಕ್ಕೆ ಕೃಷ್ಣ-ಗೋದಾವರಿ ಪಾತ್ರದಿಂದಲೂ ಲಘು ಕಚ್ಚಾ ತೈಲ ಲಭ್ಯವಾಗುವ ನಿರೀಕ್ಷೆ ಇದೆಯಾದರೂ, ಒಂದು ವೇಳೆ ಯುದ್ಧವು ದೀರ್ಘಕಾಲ ಮುಂದುವರಿದಲ್ಲಿ ಪರಿಸ್ಥಿತಿ ಕಠಿಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









