ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಆಕಸ್ಮಿಕ ದುರ್ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುತ್ತಿದ್ದಾಗ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾಲು ಸಂಕ (ಸಣ್ಣ ಸೇತುವೆ) ಏಕಾಏಕಿ ಮುರಿದು ಬಿದ್ದಿದ್ದೇ ಈ ಅವಘಡಕ್ಕೆ ಮುಖ್ಯ ಕಾರಣವಾಗಿದೆ.
ಘಟನೆಯ ವಿವರದಂತೆ, ದೈವದ ಭಂಡಾರವನ್ನು ಭವ್ಯ ಮೆರವಣಿಗೆಯ ಮೂಲಕ ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳ ಘೋಷದೊಂದಿಗೆ ಭಕ್ತರು ಸಾಗುತ್ತಿದ್ದಾಗ, ಪಲ್ಲಕ್ಕಿ ಹೊತ್ತವರು ಕಾಲು ಸಂಕದ ಮೇಲೆ ದಾಟುತ್ತಿದ್ದರು. ಈ ವೇಳೆ ಸೇತುವೆಯ ಭಾರ ತಾಳಲಾರದೆ ಸಿಮೆಂಟ್ ಬೀಮ್ ಸಮೇತ ಕುಸಿದು ಬಿದ್ದಿದೆ. ಈ ಪರಿಣಾಮ ಪಲ್ಲಕ್ಕಿಯು ಹಳ್ಳಕ್ಕೆ ಉರುಳಿ ಬಿದ್ದಿದ್ದು, ಅದರಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರೆ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಹಾಗೂ ಪಲ್ಲಕ್ಕಿ ಹೊತ್ತಿದ್ದ ಇತರ ಆರು ಮಂದಿ ಎಂದು ಗುರುತಿಸಲಾಗಿದೆ. ಸಂಕದ ಕಾಂಕ್ರೀಟ್ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದ ಕಾರಣ ಗಾಯದ ತೀವ್ರತೆ ಹೆಚ್ಚಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದೃಶ್ಯಗಳನ್ನೊಳಗೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









