ಮಂಗಳೂರು : ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ನೇಮೋತ್ಸವವು ತುಳುನಾಡಿನ ದೈವಾರಾಧನಾ ಪರಂಪರೆಯ ಕಟ್ಟುಕಟ್ಟಳೆಗಳ ಉಲ್ಲಂಘನೆಯ ಆರೋಪಕ್ಕೆ ಗುರಿಯಾಗಿದೆ. ಫೆಬ್ರವರಿ 1, 2026ರಂದು ನಡೆದ ಈ ಪವಿತ್ರ ಸೇವೆಯಲ್ಲಿ ಅನ್ಯಕೋಮಿನ (ಕ್ರಿಶ್ಚಿಯನ್) ಯುವಕನನ್ನು ದೈವ ನರ್ತನಕ್ಕೆ ಬಳಸಿಕೊಳ್ಳುವ ಮೂಲಕ ಸನಾತನ ಸಂಪ್ರದಾಯವನ್ನು ಗಾಳಿಗೆ ತೂರಲಾಗಿದೆ ಎಂದು ತುಳು ವಿದ್ವಾಂಸರು ಹಾಗೂ ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಅವರು ಗಂಭೀರವಾಗಿ ಆಪಾದಿಸಿದ್ದಾರೆ. ಮಂಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ದೈವ ನರ್ತಕ ದಿವಂಗತ ಗಣೇಶ್ ಪಂಬದ ಅವರ ಕ್ರಿಶ್ಚಿಯನ್ ಪತ್ನಿಗೆ ಜನಿಸಿದ ಪುತ್ರನನ್ನು ಬಂಟ ದೈವದ ನರ್ತನ ಸೇವೆಗೆ ನಿಯೋಜಿಸಿರುವುದು ಮೂಲ ನಂಬಿಕೆಗಳಿಗೆ ಧಕ್ಕೆ ತಂದಿದೆ ಎಂದು ಡಾ. ರತಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ನೇಮದ ಉಸ್ತುವಾರಿ ವಹಿಸಿದ್ದ ಗಣೇಶ್ ಬಾಯಾರು ಮತ್ತು ಸೂರಜ್ ಎಂಬುವವರು, ಅರ್ಹ ಪಂಬದ ಸಮುದಾಯದ ನರ್ತರನ್ನು ಬಳಸುವ ಬದಲಾಗಿ, ಹಣಕಾಸಿನ ಲಾಭಕ್ಕಾಗಿ ಈ ಅಡ್ಡದಾರಿಯನ್ನು ಹಿಡಿದಿದ್ದಾರೆ. ಈ ಲಾಭದ ಆಸೆಯು ಪವಿತ್ರ ಆಚರಣೆಯನ್ನು ಅಪವಿತ್ರಗೊಳಿಸಿದೆ ಎಂದು ಅವರು ದೂರಿದ್ದಾರೆ.
ಬೋಳೂರು ದೈವಸ್ಥಾನದಲ್ಲಿ ಈ ಹಿಂದೆ ಘಟಾನುಘಟಿ ದೈವ ನರ್ತಕರು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು. ಆದರೆ ಈಗಿನ ಆಡಳಿತ ಸಮಿತಿಯು ನರ್ತಕರನ್ನು ಬದಲಿಸಿ ಗಣೇಶ್ ಪಂಬದ ಎಂಬುವವರಿಗೆ ಜವಾಬ್ದಾರಿ ನೀಡಿದ ಪರಿಣಾಮವಾಗಿ ಇಂತಹ ಅನಾಚಾರ ಸಂಭವಿಸಿದೆ. ಇದರ ಬಗ್ಗೆ ಪ್ರಶ್ನಿಸಿದಾಗ “ಯಾರನ್ನು ಬೇಕಾದರೂ ನೇಮ ಕಟ್ಟಿಸುತ್ತೇವೆ” ಎಂಬ ಉಡಾಫೆಯ ಉತ್ತರ ಬಂದಿದ್ದು, ಸ್ತ್ರೀತ್ವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಿಂದಿಸಲಾಗಿದೆ ಎಂದು ಡಾ. ರತಿ ವಿಷಾದಿಸಿದ್ದಾರೆ. ಅಲ್ಲದೆ, ಇಂತಹ ಕೃತ್ಯವೆಸಗಿದವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲಾಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮೀಯ ಶೈಲಿಯ ಅಬ್ಬರವನ್ನು ದೈವ ನರ್ತನದಲ್ಲಿ ನಿರೀಕ್ಷಿಸಲಾಗುತ್ತಿದ್ದು, ನೈಜ ಪರಂಪರೆಯ ನರ್ತಕರು ಕಡೆಗಣಿಸಲ್ಪಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಈಗಾಗಲೇ ರಾಜ್ಯ ಮಹಿಳಾ ಆಯೋಗ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲಾಗಿದ್ದು, ತುಳುನಾಡಿನ ದೈವಾರಾಧಕರು ಮತ್ತು ಸಾರ್ವಜನಿಕರು ಈ ಸಂಪ್ರದಾಯದ ರಕ್ಷಣೆಗೆ ಒಟ್ಟಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









