
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ ಇಂದು ‘ಈದುಲ್ ಫಿತ್ರ್’ ಹಬ್ಬವನ್ನು ಅತ್ಯಂತ ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳ ಕಾಲ ಪವಿತ್ರ ರಮಝಾನ್ ಉಪವಾಸ ವ್ರತಗಳನ್ನು ಪೂರೈಸಿದ ಮುಸ್ಲಿಂ ಬಾಂಧವರು, ಮಸೀದಿ ಮತ್ತು ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಿದರು. ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯಗಳನ್ನು ಹಚ್ಚಿಕೊಂಡ ಹಿರಿಯರು ಮತ್ತು ಮಕ್ಕಳು ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಮಾಝ್ ಮತ್ತು ವಿಶೇಷ ಪ್ರವಚನಗಳ (ಖುತ್ಬಾ) ನಂತರ ಸಾರ್ವಜನಿಕರು ಸ್ಮಶಾನಗಳಿಗೆ ಭೇಟಿ ನೀಡಿ ಅಗಲಿದ ಕುಟುಂಬದ ಸದಸ್ಯರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮನೆಮನೆಗಳಲ್ಲಿ ವಿಶಿಷ್ಟ ಬಗೆಯ ಖಾದ್ಯ ಹಾಗೂ ಸಿಹಿತಿಂಡಿಗಳ ಸವಿಯೊಂದಿಗೆ ಹಬ್ಬದ ಕಳೆ ಮನೆಮಾಡಿತ್ತು. ನೆರೆಹೊರೆಯವರು ಹಾಗೂ ಸಂಬಂಧಿಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಭ್ರಾತೃತ್ವ ಮತ್ತು ಸೌಹಾರ್ದತೆಯ ಸಂದೇಶವನ್ನು ಪಸರಿಸಲಾಯಿತು.
ಮಂಗಳೂರಿನ ಬಾವುಟಗುಡ್ಡದ ಈದ್ಗಾ ಮಸೀದಿಯಲ್ಲಿ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಮಾಝ್ ನೇತೃತ್ವ ವಹಿಸಿದ್ದರೆ, ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಸೈಯದ್ ಶಂಸುದ್ದೀನ್ ಬಾಸಿತ್ ಬಾ ಅಲವಿ ತಂಳ್ ಪ್ರಾರ್ಥನೆ ನಡೆಸಿಕೊಟ್ಟರು. ಉಳ್ಳಾಲದ ಜುಮಾ ಮಸೀದಿಯಲ್ಲಿ ಅಬ್ದುಲ್ ಮಜೀದ್ ಫಾಳಿಲಿ ಹಿಕಮಿ ಸಖಾಫಿ ನೇತೃತ್ವದಲ್ಲಿ ಈದ್ ನಮಾಝ್ ಜರುಗಿತು. ಈ ಸಂದರ್ಭದಲ್ಲಿ ಪ್ರಮುಖ ಗಣ್ಯರಾದ ಯೆನೆಪೊಯ ಅಬ್ದುಲ್ಲಾ ಕುಂಣಿ, ಬಿ.ಜೆ. ಹನೀಫ್ ಹಾಜಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ಸಡಗರದ ಸಂದರ್ಭದಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಗಣ್ಯರ ಸೌಹಾರ್ದ ಭೇಟಿ ವಿಶೇಷವಾಗಿತ್ತು. ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಂತಾದವರು ಮಸೀದಿಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು. ಈ ಮೂಲಕ ಕರಾವಳಿಯಾದ್ಯಂತ ಹಬ್ಬವು ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿ ಅದ್ದೂರಿಯಾಗಿ ನೆರವೇರಿತು.
ಈದುಲ್ ಫಿತ್ರ್ ಶುಭಾಶಯ: ಶಾಂತಿ ಮತ್ತು ನೆಮ್ಮದಿಗೆ ಯು.ಟಿ. ಖಾದರ್ ಹಾರೈಕೆ
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಹಾಗೂ ಜನತೆಗೆ ‘ಈದುಲ್ ಫಿತ್ರ್’ ಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಒಂದು ತಿಂಗಳ ಕಾಲ ಪವಿತ್ರ ರಮಝಾನ್ ಉಪವಾಸ ವ್ರತವನ್ನು ಶ್ರದ್ಧಾಭಕ್ತಿಯಿಂದ ಪೂರೈಸಿದ ಬಳಿಕ ಬಂದಿರುವ ಈ ಹಬ್ಬವು ಎಲ್ಲರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಲಿ ಎಂದು ಅವರು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈದುಲ್ ಫಿತ್ರ್ ಹಬ್ಬವು ಸರ್ವರಿಗೂ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು. ವಿಶೇಷವಾಗಿ ಜಾಗತಿಕವಾಗಿ ಪ್ರಸ್ತುತ ಸೃಷ್ಟಿಯಾಗಿರುವ ವಿವಿಧ ಸಂಘರ್ಷದ ವಾತಾವರಣಗಳು ತಿಳಿಯಾಗಲಿ ಹಾಗೂ ವಿಶ್ವದಾದ್ಯಂತ ಶಾಂತಿ ನೆಲೆಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವವರಿಗೆ ಸೂಕ್ತ ನೆರವು ಮತ್ತು ಸಾಂತ್ವನ ದೊರೆಯುವಂತಾಗಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









