ಮಂಗಳೂರು : ಸಾರ್ವಜನಿಕರ ದೂರುಗಳು ಹಾಗೂ ಸ್ವಯಂಪ್ರೇರಿತ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಜಿಲ್ಲಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ದಿನೇಶ್ ಬಿ.ಪಿ. ಅವರ ನೇತೃತ್ವದಲ್ಲಿ ನಡೆದ ಈ ಹಠಾತ್ ತಪಾಸಣೆಯಲ್ಲಿ 4 ಡಿಎಸ್ಪಿಗಳು, 5 ಇನ್ಸ್ಪೆಕ್ಟರ್ಗಳು ಹಾಗೂ 55 ಸಿಬ್ಬಂದಿ ಒಳಗೊಂಡ ತಂಡವು ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ಮತ್ತು ಬೆಳ್ತಂಗಡಿ ತಾಲೂಕು ಕಚೇರಿಗಳಿಗೆ ಏಕಕಾಲಕ್ಕೆ ಭೇಟಿ ನೀಡಿ ಬುಧವಾರ ಬೆಳಗಿನಿಂದ ರಾತ್ರಿಯವರೆಗೆ ಸಮಗ್ರ ದಾಖಲೆಗಳನ್ನು ಜಾಲಾಡಿದೆ.
ಈ ಕಾರ್ಯಾಚರಣೆಯ ವೇಳೆ ಪ್ರತಿಯೊಂದು ತಾಲೂಕು ಕಚೇರಿಯ ವಿವಿಧ ವಿಭಾಗಗಳಲ್ಲಿ ಹಲವು ತಿಂಗಳುಗಳಿಂದ ಕೊಳೆಯುತ್ತಿದ್ದ ಅರ್ಜಿಗಳು ಹಾಗೂ ನನೆಗುದಿಗೆ ಬಿದ್ದಿದ್ದ ಕಡತಗಳನ್ನು ಕಂಡ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಕಚೇರಿಗಳಲ್ಲಿ ತಹಶೀಲ್ದಾರ್ ಹಾಗೂ ಸಿಬ್ಬಂದಿಯನ್ನು ನೇರವಾಗಿ ಪ್ರಶ್ನಿಸಿದ ತಂಡ, ಕಡತಗಳ ವಿಲೇವಾರಿಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬಕ್ಕೆ ಸೂಕ್ತ ಕಾರಣ ನೀಡುವಂತೆ ತರಾಟೆಗೆ ತೆಗೆದುಕೊಂಡಿತು.
ಸುಳ್ಯ ತಾಲೂಕಿನಲ್ಲಿ ಕೇಳಿಬಂದಿದ್ದ ಪ್ರಮುಖ ಅಕ್ರಮದ ಆರೋಪವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಿದರು. ಪಂಬೆತ್ತಾಡಿ ಮತ್ತು ಕುತ್ಕುಂಜ ಗ್ರಾಮಗಳಲ್ಲಿ ಒಂದೇ ಕುಟುಂಬದ ಮೂವರಿಗೆ 94C ಯೋಜನೆಯಡಿ ಭೂಮಿ ಮಂಜೂರು ಮಾಡಲಾಗಿದೆ ಎಂಬ ದೂರಿನ ಅಡಿಯಲ್ಲಿ ಕಡತಗಳನ್ನು ತನಿಖೆಗೊಳಪಡಿಸಲಾಯಿತು. ಇದೇ ವೇಳೆ ಕನಕಮಜಲುವಿನ ಸೋಮನಾಥ್ ಎಂಬ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಂಬಂಧಿತ ಕೇಸ್ವರ್ಕರ್ ಹಾಗೂ ಫೈಲ್ ವಿವರಗಳನ್ನು ಡಿಎಸ್ಪಿ ಅವರು ಸ್ಥಳದಲ್ಲೇ ದಾಖಲಿಸಿಕೊಂಡರು.
ಇನ್ನೊಂದೆಡೆ, ಉಳ್ಳಾಲ ತಾಲೂಕು ಕಚೇರಿಯ ಆಡಳಿತ ವೈಫಲ್ಯ ಮತ್ತು ದೂರುಗಳ ಹಿನ್ನೆಲೆಯಲ್ಲಿ ಬೆಳಗ್ಗೆ 11ರಿಂದ ರಾತ್ರಿಯವರೆಗೆ ಸತತ ತಪಾಸಣೆ ನಡೆಸಲಾಯಿತು. ಬಗರ್ ಹುಕುಂ ಭೂಮಿ ಮಂಜೂರಾತಿ ಅರ್ಜಿ ಬಾಕಿ ಇಟ್ಟಿರುವುದು ಹಾಗೂ ಸರ್ಕಾರಿ ಜಾಗ ಖಾಸಗಿಯವರ ಪಾಲಾಗುತ್ತಿರುವ ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಕಚೇರಿಗೆ ಬಂದಿದ್ದ ಸಾರ್ವಜನಿಕರು ನೇರವಾಗಿ ತಮಗಾದ ಅನ್ಯಾಯಗಳನ್ನು ಅಧಿಕಾರಿಗಳ ಮುಂದೆ ತೊಡಗಿಕೊಂಡಿದ್ದು, ಸೂಕ್ತ ಕ್ರಮದ ಭರವಸೆ ಸಿಕ್ಕಿದೆ.
ಮೂಲ್ಕಿ ಮತ್ತು ಮೂಡುಬಿದಿರೆ ತಾಲೂಕು ಕಚೇರಿಗಳಲ್ಲೂ ತಡರಾತ್ರಿಯವರೆಗೂ ಪರಿಶೀಲನೆ ಮುಂದುವರಿದಿದ್ದು, ಅರ್ಜಿ ವಿಲೇವಾರಿ ಪ್ರಕ್ರಿಯೆಯಲ್ಲಿದ್ದ ಲೋಪದೋಷಗಳನ್ನು ಪತ್ತೆ ಹಚ್ಚಲಾಯಿತು. ತಪಾಸಣೆಯ ವೇಳೆ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಸಾಲು ಸಾಲು ನ್ಯೂನತೆಗಳು ಕಂಡುಬಂದಿದ್ದು, ಈ ಕುರಿತು ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









