ಮಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಮಂಗಳೂರಿನ ನವ ಮಂಗಳೂರು ಬಂದರಿಗೆ ರಷ್ಯಾ ಮತ್ತು ಅಮೆರಿಕದ ಬೃಹತ್ ಇಂಧನ ನೌಕೆಗಳು ಆಗಮಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಭಾನುವಾರದಂದು ರಶ್ಯದ ತೈಲ ಟ್ಯಾಂಕರ್ ‘ಆಕ್ವಾ ಟೈಟಾನ್’ (Aqua Titan) ಬಂದರಿಗೆ ತಲುಪಿದ್ದು, ಇದು ಇಂಧನ ಕೊರತೆಯ ಭೀತಿಯಲ್ಲಿದ್ದ ಪ್ರದೇಶಕ್ಕೆ ತುಸು ಸಮಾಧಾನ ತಂದಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಹಡಗು ಮೊದಲು ಚೀನಾಕ್ಕೆ ತೆರಳಬೇಕಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸುತ್ತಿದ್ದ ಈ ನೌಕೆಯು ಕಳೆದ ವಾರ ಹಠಾತ್ತನೆ ಯು-ಟರ್ನ್ ಪಡೆದು ಭಾರತದತ್ತ ಮುಖ ಮಾಡಿತ್ತು.
ಅದೇ ಸಮಯದಲ್ಲಿ, ಅಮೆರಿಕದ ಟೆಕ್ಸಾಸ್ನಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ ‘ಪಿಕ್ಸಿಸ್ ಪಯೋನೀರ್’ (Pyxis Pioneer) ಎಂಬ ಸರಕು ನೌಕೆಯೂ ಮಂಗಳೂರು ಬಂದರನ್ನು ಪ್ರವೇಶಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಇರಾನ್ನ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದರಿಂದ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಜಲಸಂಧಿಯು ಜಾಗತಿಕ ಇಂಧನ ಸಾಗಾಟದ ಪ್ರಮುಖ ಮಾರ್ಗವಾಗಿದ್ದು, ಇದರ ಬಂದ್ನಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಇಂಧನ ಪೂರೈಕೆಗಾಗಿ ಪರ್ಯಾಯ ಮಾರ್ಗಗಳನ್ನು ಅವಲಂಬಿಸುವಂತಾಗಿದೆ.
ಈ ಎರಡು ಬೃಹತ್ ನೌಕೆಗಳ ಆಗಮನದಿಂದಾಗಿ ಕರಾವಳಿ ತೀರದ ಇಂಧನ ಮತ್ತು ಅನಿಲ ದಾಸ್ತಾನು ಸಾಮರ್ಥ್ಯಕ್ಕೆ ಬಲ ಬಂದಂತಾಗಿದೆ. ಯುದ್ಧದ ಭೀತಿಯಿಂದಾಗಿ ಮಾರುಕಟ್ಟೆಯಲ್ಲಿ ಉಂಟಾಗಬಹುದಾಗಿದ್ದ ತೈಲ ಬೆಲೆ ಏರಿಕೆ ಅಥವಾ ಕೊರತೆಯನ್ನು ನೀಗಿಸಲು ಈ ಪೂರೈಕೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಂತರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಆಯಕಟ್ಟಿನ ಇಂಧನ ಪೂರೈಕೆ ನಿರಂತರವಾಗಿರುವುದು ಆರ್ಥಿಕತೆಯ ದೃಷ್ಟಿಯಿಂದ ಮಹತ್ವದ ವಿದ್ಯಮಾನವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









