ಮಂಗಳೂರು: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವನ್ನು ಪುನರಾರಂಭಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರು, ಹಜ್ ಭವನ ನಿರ್ಮಾಣಕ್ಕೆ ಅಗತ್ಯವಾದ ಜಾಗ ಮತ್ತು ಅನುದಾನ ಲಭ್ಯವಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಿಂದ ಹಜ್ ಕಮಿಟಿ ಮೂಲಕ ಸುಮಾರು 7,000 ಜನರು ಯಾತ್ರೆಗೆ ತೆರಳುತ್ತಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ 1,300 ಯಾತ್ರಿಕರು ಇರುತ್ತಾರೆ. ಆದರೆ ಮಂಗಳೂರಿನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಯಾತ್ರಿಕರು ಬೆಂಗಳೂರಿಗೆ ತೆರಳಿ ಅಲ್ಲಿ ನಾಲ್ಕು ದಿನಗಳ ಕಾಲ ತಂಗಬೇಕಾದ ಅನಿವಾರ್ಯತೆ ಇದೆ. ಇದು ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದ್ದು, ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು.
ಹಜ್ ಭವನಕ್ಕಾಗಿ ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ ಘೋಷಣೆಯಾಗಿ ಹಲವು ವರ್ಷಗಳೇ ಸಂದಿವೆ. ಮುಡಿಪು ಮತ್ತು ಬಜ್ಜೆಯ ಕೆಂಜಾರ್ ಬಳಿ 3.5 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇನಾಯತ್ ಅಲಿ ಎಂಬುವವರು ದಾನವಾಗಿ ನೀಡಿದ ಆಸ್ತಿಯೂ ಲಭ್ಯವಿದೆ. ಹೀಗಿದ್ದರೂ ಕಳೆದ ಒಂದೂವರೆ ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಸದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ವಿಳಂಬ ಧೋರಣೆಯನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸಿದೆ.
ಹಿಂದೆ ಕೊರೊನಾ ಸಮಯದವರೆಗೆ ಮಂಗಳೂರಿನಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವಿತ್ತು. ಅದನ್ನು ಈಗ ಪುನಃ ಆರಂಭಿಸಲು ಕೇಳಿದರೆ ಪೂರಕ ವ್ಯವಸ್ಥೆ ಇಲ್ಲ ಎಂಬ ನೆಪ ಹೇಳಲಾಗುತ್ತಿದೆ. ಮಂಗಳೂರಿನ ಸುತ್ತಮುತ್ತ ಸಾಕಷ್ಟು ಮಸೀದಿಗಳು ಹಾಗೂ ತಂಗಲು ಸೌಲಭ್ಯಗಳಿದ್ದು, ನೇರ ವಿಮಾನಯಾನ ಆರಂಭಿಸಿದರೆ ಉಡುಪಿ ಮತ್ತು ಕಾಸರಗೋಡು ಸೇರಿದಂತೆ ಸಾವಿರಾರು ಯಾತ್ರಿಕರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಹಜ್ ಭವನ ನಿರ್ಮಾಣ ಮತ್ತು ವಿಮಾನ ಸೌಲಭ್ಯಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









