ಸುಳ್ಯ : ಪೆರಾಜೆ ಸಮೀಪದ ಕಲ್ಬರ್ಪೆ ಎಂಬಲ್ಲಿ ಕಳೆದ ರಾತ್ರಿ ಕಾಡಾನೆಯೊಂದು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಘಟನೆ ಸಂಭವಿಸಿದೆ. ಅರಣ್ಯದಂಚಿನ ತೋಟವೊಂದರಲ್ಲಿ ಆಹಾರ ಹುಡುಕುತ್ತಾ ಬಂದಿದ್ದ ಆನೆಯು, ಕತ್ತಲೆಯಲ್ಲಿ ದಾರಿ ಕಾಣದೆ ಆಯತಪ್ಪಿ ತೆರೆದ ಬಾವಿಯೊಳಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಮುಂಜಾನೆ ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆನೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಜೆಸಿಬಿ ಯಂತ್ರವನ್ನು ಬಳಸಿ ಬಾವಿಯ ಒಂದು ಬದಿಯನ್ನು ಮಣ್ಣು ಅಗೆದು ಇಳಿಜಾರಿನಂತೆ ಮಾಡಲಾಯಿತು. ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ಸತತ ಪ್ರಯತ್ನದ ಫಲವಾಗಿ ಆನೆಯು ಬಾವಿಯಿಂದ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ಅಂತಿಮವಾಗಿ ಆನೆಯು ಯಾವುದೇ ಗಾಯಗಳಿಲ್ಲದೆ ಬಾವಿಯಿಂದ ಹೊರಬಂದು, ಯಶಸ್ವಿಯಾಗಿ ಮತ್ತೆ ಕಾಡಿನತ್ತ ಹೆಜ್ಜೆ ಹಾಕಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









