ಕರಾವಳಿಯ ಧಾರ್ಮಿಕ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ‘ನಿನಾದ್ – ಭುರ್ಗ್ಯಾಂಲೆಂ ಫೆಸ್ತ್ 2K26’ ಮಕ್ಕಳ ಬೃಹತ್ ಸಮಾವೇಶವು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿತು. ‘ಮಕ್ಕಳ ವರ್ಷ 2026’ರ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ವಿಶೇಷ ಕೌತುಕಕ್ಕೆ ಮಂಗಳೂರು ಧರ್ಮಕ್ಷೇತ್ರದ ವ್ಯಾಪ್ತಿಗೆ ಒಳಪಡುವ 125 ಚರ್ಚ್ಗಳಿಂದ ಆಗಮಿಸಿದ್ದ 6.5 ಸಾವಿರಕ್ಕೂ ಹೆಚ್ಚು ಮಕ್ಕಳು ಸಾಕ್ಷಿಯಾದರು.
ಈ ಸಮಾವೇಶದ ಅತ್ಯಂತ ನಯನಮನೋಹರ ಘಟ್ಟವೆಂದರೆ 6,500 ಮಕ್ಕಳು ಒಂದಾಗಿ ರಚಿಸಿದ ಬೃಹತ್ ಚೈತನ್ಯದ ಆಕೃತಿ. ಮೈದಾನದಲ್ಲಿ ಶಿಸ್ತಿನಿಂದ ನಿಂತ ಪುಟಾಣಿಗಳು ಪವಿತ್ರ ಪರಮಪ್ರಸಾದ, ಪಾನಪಾತ್ರೆ ಮತ್ತು ಶಿಲುಬೆಯ ರೂಪವನ್ನು ತಳೆದು, ಕ್ರಿಸ್ತನ ತ್ಯಾಗ ಹಾಗೂ ಪ್ರೀತಿಯಲ್ಲಿ ತಾವೆಲ್ಲರೂ ಆಳವಾಗಿ ಬೇರೂರಿದ್ದೇವೆ ಎಂಬ ಪವಿತ್ರ ಸಂದೇಶವನ್ನು ಸಾರಿದರು. ಈ ಅಪರೂಪದ ದೃಶ್ಯವನ್ನು ಡ್ರೋನ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯಲಾಯಿತು.
ಕಾರ್ಯಕ್ರಮದ ಸನ್ನಿಧಾನ ವಹಿಸಿ ಮಾತನಾಡಿದ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, ಮಕ್ಕಳು ದೇವರ ರಾಜ್ಯದ ಶ್ರೇಷ್ಠ ಫಲಗಳು ಹಾಗೂ ಇಡೀ ಸಮುದಾಯದ ಬಹುದೊಡ್ಡ ಆಸ್ತಿ ಎಂದು ಬಣ್ಣಿಸಿದರು. ಮಕ್ಕಳ ಸುರಕ್ಷತೆ ಮತ್ತು ಪಾಲನೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಯಾವುದಕ್ಕೂ ಭಯಪಡದೆ ಮುನ್ನಡೆಯುವಂತೆ ಕರೆ ನೀಡಿದರು. ಬಳಿಕ ಅವರ ದಿವ್ಯ ನೇತೃತ್ವದಲ್ಲಿ 100 ಮಕ್ಕಳ ಭಕ್ತಿಪೂರ್ವಕ ಗಾಯನದೊಂದಿಗೆ ಬಲಿಪೂಜೆ ಸಂಪನ್ನಗೊಂಡಿತು. ಶ್ರೇಷ್ಠಗುರು ಮೊನ್ಸಿಜ್ಞೋರ್ ಮ್ಯಾಕ್ಸಿಮ್ ನೊರೊನ್ಹಾ, ಕುಲಪತಿ ವಂದನೀಯ ಡಾ. ವಿಕ್ಟರ್ ಜಾರ್ಜ್ ಡಿ’ಸೋಜ ಹಾಗೂ ವಾಮಂಜೂರು ಚರ್ಚ್ನ ಧರ್ಮಗುರು ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಸೇರಿದಂತೆ ಹಲವು ಧರ್ಮಗುರುಗಳು ಪಾಲ್ಗೊಂಡರು.
ಇದೇ ವೇಳೆ ಮಕ್ಕಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾನೂನು ಮತ್ತು ಜಾಗೃತಿ ಗೋಷ್ಠಿ ನಡೆಯಿತು. ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ವಂದನೀಯ ಫಾದರ್ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಅವರು ಮಕ್ಕಳ ಹಕ್ಕುಗಳು ಹಾಗೂ ಮಾನವ ಘನತೆಯ ಬಗ್ಗೆ ವಿವರಣೆ ನೀಡಿದರು. ಸುಮಾರು 1000ಕ್ಕೂ ಮಿಕ್ಕಿ ಹಾಜರಿದ್ದ ಅನಿಮೇಟರ್ಗಳು ಮತ್ತು ಸ್ವಯಂಸೇವಕರ ಸಮ್ಮುಖದಲ್ಲಿ ಕಿರುಕುಳ ತಡೆಯುವ ಶಾಸನಬದ್ಧ ಕ್ರಮಗಳ ಅರಿವು ಮೂಡಿಸಲಾಯಿತು.
ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉದ್ಯಮಿ ಮೈಕಲ್ ಡಿ’ಸೋಜ, ತಂದೆ-ತಾಯಿ, ಮಾತೃಭಾಷೆ ಮತ್ತು ಮಾತೃಭೂಮಿಗೆ ಸದಾ ಗೌರವ ನೀಡುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಕ್ಲೆಮೆಂಟ್ ಪಿಂಟೋ – ರೇಷ್ಮಾ ಮೇರಿ ರೆಬೆಲ್ಲೊ, ವಿಜಯ್ – ಲವೀನಾ ಶಾಂತಿ ಡಿ’ಸೋಜ ದಂಪತಿ, ವಿದ್ಯಾರ್ಥಿನಿ ಎಸ್ತರ್ ಗ್ರೇಸ್ ಫೆರ್ನಾಂಡಿಸ್ ಹಾಗೂ ಆನ್ಸನ್ ಕ್ಲೆಮೆಂಟ್ ನಜರೆತ್ ತಮ್ಮ ಜೀವನಾನುಭವ ಹಂಚಿಕೊಂಡರು. ಮನೋಜ್ ಫೆರ್ನಾಂಡಿಸ್ ಸಂವಾದ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ನಡೆದ ಶೋಭಾಯಾತ್ರೆಯಲ್ಲಿ 125 ಮಕ್ಕಳು ಪಾಲಕ ಸಂತರ ವೇಷಭೂಷಣ ತೊಟ್ಟು ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಬೈಬಲ್ ಆಧಾರಿತ 12 ವಲಯಗಳ ಸ್ತಬ್ಧಚಿತ್ರಗಳು, ಫಾದರ್ ಅಬೆಲ್ ಲೋಬೊ ಸಂಯೋಜನೆಯ ಪ್ರಾರ್ಥನಾ ನೃತ್ಯ ಹಾಗೂ ಫಾದರ್ ರೊನಾಲ್ಡ್ ಡಿ’ಸೋಜ ರಚನೆಯ ಥೀಮ್ ಗೀತೆಗೆ ಐಸಿವೈಎಂ ಯುವಕರ ನೃತ್ಯವು ಸಂಭ್ರಮಕ್ಕೆ ಮೆರುಗು ತಂದಿತು. ಕುಮಾರಿ ಪ್ರಿಶಾ ಮೆನೆಜೆಸ್ ಹಾಗೂ ಪ್ರಿನ್ಸ್ಟನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿ, ಫಾ. ಆಲ್ವಿನ್ ರಿಚರ್ಡ್ ಡಿ’ಸೋಜ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









