ಮಂಗಳೂರು : ಕಳೆದ ಶನಿವಾರ ರಾತ್ರಿ ಮಂಗಳೂರಿನ ನಂತೂರು ಸಮೀಪದ ತಾರಾಯಿತೋಟ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಕೆ. ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅತೀ ವೇಗದಿಂದ ಬಂದ ಬೈಕ್ ಸವಾರನ ಬೇಜವಾಬ್ದಾರಿತನಕ್ಕೆ ಅಮಾಯಕ ಸ್ಕೂಟರ್ ಸವಾರ ಬಲಿಯಾಗಿದ್ದು, ಕರಾವಳಿಯ ಫೋಟೋಗ್ರಾಫರ್ ಸಮುದಾಯವು ಈ ಘಟನೆಯಿಂದ ಆಘಾತಕ್ಕೊಳಗಾಗಿದೆ.
ಘಟನೆಯ ವಿವರದಂತೆ, ಶನಿವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಧರ್ಮಸ್ಥಳ ಮೂಲದ ಗೋಪಾಲಕೃಷ್ಣ ಎಂಬ ಯುವಕ ತನ್ನ ಎಫ್ಜಿ ಬೈಕನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಓವರ್ ಟೇಕ್ ಮಾಡುವ ಭರದಲ್ಲಿ ಮೋಹನ್ ಚಂದರ್ ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗೋಪಾಲಕೃಷ್ಣ ನಿಯಂತ್ರಣ ತಪ್ಪಿ ಟಿಪ್ಪರ್ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ಕೂಟರ್ನಲ್ಲಿದ್ದ ಮೋಹನ್ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಟೆಂಪೋ ಚಾಲಕ ಗಂಗಾಧರ್ ಅಂಬ್ಲಮೊಗರು ಎಂಬವರು ಸಾರ್ವಜನಿಕರ ನೆರವಿನಿಂದ ಗಾಯಾಳುವನ್ನು ಕಂಕನಾಡಿಯ ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಎರಡು ದಿನಗಳ ಜೀವನ್ಮರಣ ಹೋರಾಟದ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.
ಈ ದುರಂತವು ಮೋಹನ್ ಚಂದರ್ ಅವರ ಕುಟುಂಬವನ್ನು ಅನಾಥವಾಗಿಸಿದೆ. ನಾಗುರಿ ನಿವಾಸಿಯಾಗಿರುವ ಇವರು ಪದವಿನಂಗಡಿಯಲ್ಲಿ ‘ನವ್ಯ ಸ್ಟುಡಿಯೋ’ ನಡೆಸುತ್ತಿದ್ದರು. ಅತ್ಯಂತ ದುಃಖದ ಸಂಗತಿಯೆಂದರೆ, ಇವರ ಹಿರಿಯ ಮಗಳ ವಿವಾಹವು ಇದೇ ಮೇ 10ರಂದು ನಿಶ್ಚಯವಾಗಿತ್ತು. ಮಗಳ ಮದುವೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಮನೆಯಲ್ಲಿ ಈಗ ಸಂಭ್ರಮದ ಬದಲು ಮರಣಮೃದಂಗ ಮೊಳಗಿದೆ. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ಅಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಘವು ತೀವ್ರ ಸಂತಾಪ ಸೂಚಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









