ಮಂಗಳೂರು : ರೌಡಿ ಶೀಟರ್ ‘ಟ್ಯಾಬ್ಲೆಟ್’ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಎಂದು ಗುರುತಿಸಲಾಗಿದೆ. ಈ ಹೊಸ ಬಂಧನಗಳೊಂದಿಗೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಒಟ್ಟು ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಮಾರ್ಚ್ 27 ರಂದು ತೊಕ್ಕೊಟ್ಟಿನಲ್ಲಿ ಆರಿಫ್ ಚಲಾಯಿಸುತ್ತಿದ್ದ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆಸಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಪೊಲೀಸ್ ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಆರಿಫ್ನನ್ನು ಹತ್ಯೆ ಮಾಡಲು ಈ ತಂಡ ಬಹಳ ಹಿಂದಿನಿಂದಲೇ ಸಂಚು ರೂಪಿಸಿತ್ತು. ಕಳೆದ ಫೆಬ್ರವರಿ 13 ರಂದು ಆರಿಫ್ ಬೈಕಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡ ಆತನನ್ನು ಹಿಂಬಾಲಿಸಿ ಹತ್ಯೆಗೆ ಮೊದಲ ಪ್ರಯತ್ನ ನಡೆಸಿತ್ತು. ಆದರೆ ಅಂದು ಆರಿಫ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನು. ಅಂದು ಹತ್ಯೆಗೆ ವಿಫಲ ಯತ್ನ ನಡೆಸಿದ್ದ ತಂಡದಲ್ಲಿ ಭಾಗಿಯಾಗಿದ್ದವರನ್ನು ಈಗ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳು ಹತ್ಯಾಕಾಂಡದಲ್ಲಿ ವಹಿಸಿದ್ದ ಪಾತ್ರಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆರೋಪಿ ಅರ್ಷಾದ್ ಹಂತಕರಿಗೆ ಶಸ್ತ್ರಾಸ್ತ್ರ ಪೂರೈಕೆ, ಪೊಲೀಸರ ಸಂಚಾರದ ಮಾಹಿತಿ ಮತ್ತು ಹಣಕಾಸಿನ ನೆರವು ನೀಡಿದ್ದನು. ಪುಚ್ಚೆ ನಿಸಾಕ್ ಎಂಬಾತ ಈ ಹಿಂದಿನ ಕೊಲೆ ಯತ್ನ ಹಾಗೂ 2022ರಲ್ಲಿ ನಡೆದಿದ್ದ ದಾಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದನು. ಜುನೈದ್ ಎಂಬ ಆರೋಪಿ ಹಂತಕರಿಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ ಇಡೀ ಸಂಚಿನಲ್ಲಿ ಪಾಲ್ಗೊಂಡಿದ್ದನು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಶೀಘ್ರದಲ್ಲೇ ಉಳಿದವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









