ಮಂಗಳೂರು : ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಕಿಡಿಕಾರಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಬಂದ ಅನುದಾನಗಳು ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಮಂಗಳೂರು ನಗರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ತಂದಿದ್ದ ಯೋಜನೆಯನ್ನೇ ಕಾಂಗ್ರೆಸ್ ಈಗ ತನ್ನದೆಂದು ಬಿಂಬಿಸಿಕೊಳ್ಳುತ್ತಿರುವುದು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬಿಜೆಪಿ ಸರ್ಕಾರ ಘೋಷಿಸಿದ್ದ 165 ಕೋಟಿ ರೂ.ಗಳ ಅನುದಾನಕ್ಕೆ ತಡೆ ನೀಡಿದ್ದ ಕಾಂಗ್ರೆಸ್, ಈಗ ಅದೇ ಯೋಜನೆಗೆ ‘ಹಂತ-2’ ಎಂದು ಮರುನಾಮಕರಣ ಮಾಡಿ ಪ್ರಚಾರ ಪಡೆಯುತ್ತಿದೆ. ಬಜೆಟ್ನಲ್ಲಿ ಅಧಿಕೃತವಾಗಿ ಘೋಷಣೆಯಾಗಿ ಹಣಕಾಸು ಇಲಾಖೆಯ ಅನುಮೋದನೆ ಪಡೆದಿದ್ದ ಈ ಯೋಜನೆಗೆ ಈಗ ಹೊಸದಾಗಿ ಶಿಲಾನ್ಯಾಸ ಮಾಡುವ ಅಗತ್ಯವೇನಿತ್ತು ಎಂದು ಶಾಸಕರು ಪ್ರಶ್ನಿಸಿದ್ದಾರೆ. ಕೇವಲ ಬ್ಯಾನರ್ ಹಾಕಿ ಜನರನ್ನು ನಂಬಿಸುವುದು ಕಾಂಗ್ರೆಸ್ನ ಸಾಧನೆಯೇ ಹೊರತು, ಹೊಸದಾಗಿ ಯಾವುದೇ ವಿಶೇಷ ಅನುದಾನವನ್ನು ಕ್ಷೇತ್ರಕ್ಕೆ ತಂದಿಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಸಿಗುವ ಸಾಮಾನ್ಯ ಅನುದಾನವನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ನಾಯಕರು, ಮಂಗಳೂರು ದಕ್ಷಿಣಕ್ಕೆ ತಂದ ವಿಶೇಷ ಯೋಜನೆಯೊಂದರ ದಾಖಲೆ ನೀಡಲಿ ಎಂದು ಕಾಮತ್ ಸವಾಲು ಹಾಕಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ತಡೆ ನೀಡಿ, ಈಗ ಅವುಗಳು ಮತ್ತೆ ಆರಂಭವಾಗುತ್ತಿರುವಾಗ ತಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ. ಪಾಲಿಕೆಯ ತೆರಿಗೆ ಹಣದಲ್ಲಿ ನಡೆಯುವ ರಾಜಕಾಲುವೆಗಳ ಹೂಳೆತ್ತುವಂತಹ ವಾರ್ಷಿಕ ಕೆಲಸಗಳನ್ನು ಕೂಡ ಸರ್ಕಾರಿ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಇವರ ಹತಾಶೆಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆ ಹಾನಿ ಪರಿಹಾರದ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದ್ದು, ಶಾಸಕರ ಹಕ್ಕಿನಡಿ ಬರುವ ಪರಿಹಾರವನ್ನು ತಾವೇ ತಂದಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ನಗರದಲ್ಲಿ ನಡೆಯುತ್ತಿರುವ ಅಮೃತ್, ಜಲಸಿರಿ ಮತ್ತು ಒಳಚರಂಡಿ ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿವೆಯೇ ಹೊರತು ಅದರಲ್ಲಿ ರಾಜ್ಯ ಸರ್ಕಾರದ ಪಾಲಿಲ್ಲ. ಕಾಂಗ್ರೆಸ್ ಸರ್ಕಾರ ಈ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ ಒಂದೇ ಒಂದು ದಾಖಲೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಕೇವಲ ಪುಸ್ತಕ ಹಿಡಿದು ಮಾತನಾಡುವ ಕಾಂಗ್ರೆಸ್ಗೆ ಹೃದಯದಲ್ಲಿ ಗೌರವವಿಲ್ಲ ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಸರ್ಕಲ್ನಲ್ಲಿ ಅಂಬೇಡ್ಕರ್ ಸರ್ಕಲ್ ನಿರ್ಮಿಸಲು ಬಿಜೆಪಿ ಅವಧಿಯಲ್ಲೇ ಗುದ್ದಲಿ ಪೂಜೆ ನಡೆದಿದ್ದರೂ, ಕಾಂಗ್ರೆಸ್ ಅದನ್ನು ಕಾರ್ಯರೂಪಕ್ಕೆ ತರಲು ವಿಫಲವಾಗಿದೆ. ಕೇವಲ ಫೋಟೋಗಳಿಗೆ ಪೂಜೆ ಸಲ್ಲಿಸುವ ಇವರಿಗೆ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಿಸುವ ಯೋಗ್ಯತೆ ಇಲ್ಲ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ ಹಾಗೂ ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









