ಮಂಗಳೂರು : ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರ 4,399 ದಿನಗಳ ಯಶಸ್ವಿ ಆಡಳಿತದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ವಿಶೇಷ ಧಾರ್ಮಿಕ ಪ್ರಾರ್ಥನೆ ಸಲ್ಲಿಕೆಯಾಗಿದೆ. ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿಯ ವತಿಯಿಂದ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ರಂಗಪೂಜೆ ಆಯೋಜಿಸಲಾಗಿತ್ತು. ಪ್ರಧಾನಿಯವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ ಮತ್ತು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಮುನ್ನಡೆಸುವ ಶಕ್ತಿ ಸಿಗಲಿ ಎಂದು ಈ ಸಂದರ್ಭದಲ್ಲಿ ದೇವರಲ್ಲಿ ಸಂಕಲ್ಪ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಜನಪರ ಆಡಳಿತ ನೀಡುತ್ತಿರುವ ಮೋದಿ ಸರ್ಕಾರವು, ‘ವಿಕಸಿತ ಭಾರತ’ದ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದರು. ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ಪ್ರಧಾನಿಯವರ ಯಶಸ್ವಿ ಆಡಳಿತದ 12ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮುಂಬರುವ ಶನಿವಾರದಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸಂಸದರಾದ ಡಾ. ರಾಧಾ ಮೋಹನ್ ಅಗರ್ವಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅವರು ಮಾರ್ಗನ್ ಗೇಟ್ನ ಪಾಲೆಮಾರ್ ಗಾರ್ಡನ್ನಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮಹತ್ವದ ಧಾರ್ಮಿಕ ಮತ್ತು ರಾಜಕೀಯ ಸಮಾವೇಶದಲ್ಲಿ ಪ್ರಮುಖ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್, ರಮೇಶ್ ಕಂಡೆಟ್ಟು, ಮಂಜುಳಾ ರಾವ್, ಹಾಗೂ ನಂದನ್ ಮಲ್ಯ ಉಪಸ್ಥಿತರಿದ್ದರು. ಇವರೊಂದಿಗೆ ಸುಧೀರ್ ಶೆಟ್ಟಿ ಕಣ್ಣೂರು, ಮೋನಪ್ಪ ಭಂಡಾರಿ, ಸಂಜಯ್ ಪ್ರಭು, ನಿತಿನ್ ಕುಮಾರ್, ರಾಜ್ ಗೋಪಾಲ್ ರೈ ಸೇರಿದಂತೆ ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರುಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









