ಮಂಗಳೂರು : ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ ಅಂಗಸಂಸ್ಥೆಯಾದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಗುರುವಾರ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜಿಲ್ಲೆಯ 70 ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಸುಮಾರು 586 ವಿದ್ಯಾರ್ಥಿಗಳಿಗೆ ಒಟ್ಟು ₹47.64 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಲ್ಕಿ ಮೂಡಬಿದಿರಿ ಕ್ಷೇತ್ರದ ಶಾಸಕರು ಶ್ರೀ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಹೆತ್ತವರನ್ನು ಪಾಲನೆ-ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ನೀಡಲಾಗಿರುವ ಈ ವಿದ್ಯಾರ್ಥಿವೇತನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕರು ಶ್ರೀ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ವಿದ್ಯಾಭ್ಯಾಸದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಂತರ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಗೇರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮಮತ ಗಟ್ಟಿ ಅವರು ಮಾತನಾಡಿ, ಇತರೆ ಸಂಸ್ಥೆಗಳು ಸಿ.ಎಸ್.ಆರ್ ನಿಧಿಯನ್ನು ವಿವಿಧ ಕ್ಷೇತ್ರಗಳಿಗೆ ಬಳಸುತ್ತಿದ್ದರೆ, ಮಲಬಾರ್ ಸಂಸ್ಥೆ ಶಿಕ್ಷಣ, ಆಹಾರ, ವಸತಿ, ನೀರು ಮತ್ತು ಆರೋಗ್ಯ ಮೊದಲಾದ ಮಾನವ ಮೂಲಭೂತ ಅಗತ್ಯಗಳಿಗೆ ವಿಶೇಷ ಆದ್ಯತೆ ನೀಡಿ ಸಾರ್ಥಕವಾಗಿ ಬಳಸುತ್ತಿದೆ ಎಂದು ಪ್ರಶಂಸಿಸಿದರು.
ಸ್ಕಾಲರ್ಶಿಪ್ ಮಾಸ್ಟರ್ ಎಂದೇ ಖ್ಯಾತರಾದ ಶ್ರೀ ನಾರಾಯಣ ನಾಯಕ್ ಮತ್ತು ಸೈಬರ್ ಭದ್ರತಾ ತಜ್ಞರಾದ ಡಾ. ಅನಂತ್ ಪ್ರಭು ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳ ಮೂಲಕ ಆತ್ಮವಿಶ್ವಾಸ ತುಂಬಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿರ್ದೇಶಕರಾದ ಶ್ರೀ ವಿ. ಕರುಣಾಕರನ್, ಉಡುಪಿ ಶಾಖಾ ಮುಖ್ಯಸ್ಥ ಶ್ರೀ ವಿಜಯ್ ಕುಮಾರ್ ಡಿ., ಮಂಗಳೂರು ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್ ಅಡ್ಯಾರ್ ಹಾಗೂ ಹಲವು ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









