ಮಂಗಳೂರು: ಚಮ್ಮಾರ ಗಲ್ಲಿ ಮತ್ತು ಬಸವನಗುಡಿ ಪರಿಸರದ ಅಶ್ವಥ ಕಟ್ಟೆಯ ಬಳಿ ಬುಧವಾರ ಬೆಳಗಿನ ಜಾವ ಸುಮಾರು 3:30ರ ಸುಮಾರಿಗೆ ಬೃಹತ್ ಅಶ್ವಥ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿದೆ. ಈ ಘಟನೆಯಿಂದಾಗಿ ಮರದ ಸಮೀಪದಲ್ಲಿದ್ದ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಮರದ ಕೊಂಬೆಗಳು ಅಪ್ಪಳಿಸಿದ ರಭಸಕ್ಕೆ ಅಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಈ ಪೈಕಿ ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಘಟನೆ ನಡೆದ ಸಮಯದಲ್ಲಿ ಮನೆಯೊಳಗೆ ಇದ್ದ ಜನರು ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮರದ ಕೊಂಬೆ ಬಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಮಂಗಳೂರು ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ರಥಬೀದಿಯ ಬಸವನಗುಡಿ ಬಳಿಯೂ ಮರದ ಕೊಂಬೆ ಬಿದ್ದ ಕಾರಣ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.
ಇನ್ನೊಂದೆಡೆ, ನಗರದ ಅತ್ತಾವರದ ಅಯ್ಯಪ್ಪ ಮಂದಿರದ ಬಳಿ ಮಳೆಯ ಆರ್ಭಟಕ್ಕೆ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಗೋಡೆ ಕುಸಿದ ಪರಿಣಾಮವಾಗಿ ಹಲವಾರು ಕಾರುಗಳು ಜಖಂಗೊಂಡಿವೆ. ಮಳೆಯಿಂದಾಗಿ ನಗರದ ವಿವಿಧೆಡೆ ಅವಾಂತರಗಳು ಸೃಷ್ಟಿಯಾಗಿದ್ದರೂ, ಎಲ್ಲೂ ಕೂಡ ಸಾವು-ನೋವು ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಳೆಯ ಮರಗಳು ಮತ್ತು ದುರ್ಬಲ ಗೋಡೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









