ಮಂಗಳೂರು : ನವಮಂಗಳೂರು ಬಂದರು ಮಂಡಳಿ (NMPA) ಆಡಳಿತಕ್ಕೆ ಒಳಪಟ್ಟಿರುವ ಎನ್ಎಂಪಿಎ ಆಂಗ್ಲ ಮಾಧ್ಯಮ ಶಾಲೆಯನ್ನು ಮುಚ್ಚುವ ಅಥವಾ ಬೇರೆ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಯತ್ನಕ್ಕೆ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 40 ವರ್ಷಗಳಿಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಈ ವಿದ್ಯಾಸಂಸ್ಥೆಯನ್ನು ಉಳಿಸಿಕೊಳ್ಳಲು ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳ ಪರವಾಗಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಂದರು ನಿರ್ಮಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ಕುಟುಂಬಗಳ ಮಕ್ಕಳ ಭವಿಷ್ಯ ಈ ಶಾಲೆಯ ಮೇಲೆ ನಿಂತಿದೆ ಎಂದು ಪ್ರತಿಪಾದಿಸಿದ ಅವರು, ಚಿತ್ರಾಪುರ, ಹೊಸಬೆಟ್ಟು, ಸುರತ್ಕಲ್ ಸೇರಿದಂತೆ ಸುತ್ತಮುತ್ತಲ ಭಾಗದ ನೂರಾರು ವಿದ್ಯಾರ್ಥಿಗಳು ಈ ಶಾಲೆಯನ್ನೇ ಅವಲಂಬಿಸಿದ್ದಾರೆ ಎಂದು ನೆನಪಿಸಿದರು. ಜನರ ಭಾವನೆಗಳೊಂದಿಗೆ ಆಟವಾಡದೆ, ಈ ಪವಿತ್ರ ವಿದ್ಯಾಕೇಂದ್ರವನ್ನು ಮುಚ್ಚುವ ನಿರ್ಧಾರದಿಂದ ಮಂಡಳಿ ತಕ್ಷಣ ಹಿಂದೆ ಸರಿಯಬೇಕು. ಒಂದು ವೇಳೆ ಹಠಮಾರಿ ಧೋರಣೆ ಮುಂದುವರಿಸಿದರೆ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಗುಡುಗಿದರು.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ ಒಂದನೇ ತರಗತಿಯ ಪ್ರವೇಶಾತಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸದಿರುವುದು ಖಂಡನೀಯ ಎಂದು ಹೇಳಿದ ಮೊಯ್ದಿನ್ ಬಾವಾ, ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತಕ್ಷಣವೇ ಆದೇಶ ಹೊರಡಿಸಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಖಾಸಗಿ ಶಾಲೆಗಳನ್ನು ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಮಂಡಳಿ ಅವಿವೇಕದ ನಿರ್ಧಾರಕ್ಕೆ ಮುಂದಾಗಿದೆ ಎಂದು ಅವರು ಆಕ್ಷೇಪಿಸಿದರು.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು, ಈ ಹಿಂದೆ ಮುಚ್ಚಲ್ಪಟ್ಟ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಕೂಡಲೇ ಪುನರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು. ಬಡವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವ ಯಾವುದೇ ನಡೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಈ ಪತ್ರಿಕಾಗೋಷ್ಠಿಯಲ್ಲಿ ಕಮಲಕರ, ಜಾರ್ಜ್ ವಿನ್ಸೆಂಟ್ ಹಾಗೂ ಮೊಹಮ್ಮದ್ ಇಮ್ರಾನ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









