ಮಂಗಳೂರು : ಮಹಿಳಾ ಮೀಸಲಾತಿ ಬಿಲ್ ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಅನುಸರಿಸುತ್ತಿರುವ ಇಬ್ಬಂದಿ ನೀತಿಯನ್ನು ಜಾತ್ಯತೀತ ಜನತಾದಳ (ಜೆಡಿಎಸ್) ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ. ಲೋಕಸಭೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುವಂತಿವೆ. ದೇಶದ ಮಹಿಳೆಯರಿಗೆ ರಾಜಕೀಯ ಹಕ್ಕು ನೀಡುವಂತಹ ಮಹತ್ವದ ನಿರ್ಧಾರದ ಸಂದರ್ಭದಲ್ಲಿ ರಾಜಕೀಯವನ್ನು ಬದಿಗಿಟ್ಟು ಬೆಂಬಲಿಸಬೇಕಾದ ವಿರೋಧ ಪಕ್ಷಗಳು, ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಅಡ್ಡಿಪಡಿಸುತ್ತಿರುವುದು ಅವರ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಎನ್ಡಿಎ ಸರ್ಕಾರವು ಮಹಿಳಾ ಮೀಸಲಾತಿಯನ್ನು ಕೇವಲ ಭರವಸೆಯಾಗಿ ಉಳಿಸದೆ, ಅದನ್ನು ಕಾನೂನುಬದ್ಧಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ, ಹಿಂದೆ ಅಧಿಕಾರದಲ್ಲಿದ್ದಾಗ ಈ ಮಸೂದೆಯನ್ನು ಕಡೆಗಣಿಸಿದ್ದ ಕಾಂಗ್ರೆಸ್, ಈಗ ಅದು ಜಾರಿಯಾಗುವ ಹಂತದಲ್ಲಿದ್ದಾಗ ಕಾಲಹರಣ ಮಾಡುತ್ತಿದೆ. ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಅವಧಿಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗಲೂ ಕಾಂಗ್ರೆಸ್ ಬೆಂಬಲಿಸಿರಲಿಲ್ಲ. ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ ಎಂಬುದನ್ನು ವಿರೋಧ ಪಕ್ಷಗಳು ನೆನಪಿಸಿಕೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಪಾಲು ಹೊಂದಿರುವ ಮಹಿಳೆಯರಿಗೆ ಪ್ರಸ್ತುತ ಲೋಕಸಭೆಯಲ್ಲಿ ಕೇವಲ ಶೇ. 14ರಷ್ಟು ಮಾತ್ರ ಪ್ರಾತಿನಿಧ್ಯವಿದೆ. ಹೊಸ ಮಸೂದೆ ಜಾರಿಯಾದಲ್ಲಿ ಈ ಪ್ರಾತಿನಿಧ್ಯ ಶೇ. 33ಕ್ಕೆ ಏರಿಕೆಯಾಗಿ ಜಾಗತಿಕ ಮಟ್ಟದಲ್ಲಿ ಲಿಂಗ ಸಮಾನತೆ ಸಾಧ್ಯವಾಗಲಿದೆ. ಇದರೊಂದಿಗೆ 1971ರಿಂದ ಹೆಚ್ಚಾಗಿರುವ ಜನಸಂಖ್ಯೆಗೆ ಅನುಗುಣವಾಗಿ ಸಂಸದರ ಸಂಖ್ಯೆಯೂ ಹೆಚ್ಚಾಗಬೇಕಿದೆ. ಒಬ್ಬ ಸಂಸದ 25 ರಿಂದ 30 ಲಕ್ಷ ಜನರನ್ನು ಪ್ರತಿನಿಧಿಸುವುದು ಕಷ್ಟಕರವಾಗಿರುವುದರಿಂದ, ಸಂಸತ್ ಸದಸ್ಯರ ಬಲವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಹೊಸ ಸಂಸತ್ ಭವನವನ್ನು 888 ಸದಸ್ಯರ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಮಿಸಿರುವುದು ಮುಂದಿನ 25 ವರ್ಷಗಳ ದೂರದೃಷ್ಟಿಯ ನಿರ್ಧಾರವಾಗಿದೆ.
ಸ್ಥಾನಗಳ ಹೆಚ್ಚಳದಿಂದ ಕೆಲವು ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾದಷ್ಟೂ ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪಲು ಸುಲಭವಾಗುತ್ತದೆ. ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ನವ ಭಾರತದ ನೀಲನಕ್ಷೆಯಂತಿರುವ ಈ ಮಸೂದೆಯನ್ನು ವಿರೋಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತೆ. ಮಹಿಳಾ ಸಮುದಾಯಕ್ಕೆ ದ್ರೋಹ ಬಗೆಯುತ್ತಿರುವ ವಿರೋಧ ಪಕ್ಷಗಳ ನಿಲುವನ್ನು ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾಗಿ ಜೆಡಿಎಸ್ ಜಿಲ್ಲಾ ಘಟಕವು ಖಂಡಿಸುತ್ತದೆ ಎಂದು ಪ್ರಮುಖರು ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಾಕೆ ಮಾದವ ಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಹಾಗೂ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









