ಮಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಲಭ್ಯವಾಗುವಂತೆ ಮಾಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿ ಸುವ ನಿಟ್ಟಿನಲ್ಲಿ ಗಮನ ಹರಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ರಾಜ್ಯದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರವಿವಾರ ಮಂಗಳೂರಿಗೆ ಆಗಮಿಸಿದ ಸಚಿವ ಖಾದರ್ ಅವರನ್ನು ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೂರು ವರ್ಷಗಳ ಕಾಲ ರಾಜ್ಯ ವಿಧಾನ ಸಭಾಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ ಇದೀಗ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದೇನೆ,ಇತಿಹಾಸ ಪ್ರಸಿದ್ಧ ಉಳ್ಳಾಲ ಸಯ್ಯದ್ ಮದನಿ ದರ್ಗಾ, ಸೈಂಟ್ ಸೆಬಾಸ್ಟಿನ್ ಚರ್ಚ್, ಶ್ರೀಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಎಲ್ಲರ ಸಹಕಾರ, ಆಶೀರ್ವಾ ದೊಂದಿಗೆ ಜನರ ಸೇವೆ ಸಲ್ಲಿಸಲು ಬಯಸಿರುವೆನು. ರಾಜ್ಯದಲ್ಲಿ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಕಿಕೊಂಡಿರುವ ಯೋಜನೆಗಳನ್ನು ಮುಂದುವರಿಸುವೆನು ಎಂದು ಹೇಳಿದರು.
ನನ್ನ ಮಾತಿನಲ್ಲಿ, ಕೆಲಸದಲ್ಲಿ ಜಿಲ್ಲೆಯ ಕ್ಷೇತ್ರದ ಜನರು ತಲೆ ತಗ್ಗಿಸುವ ಕೆಲಸ ಮಾಡಲಾರೆ. ತಲೆ ಎತ್ತುವ ಕೆಲಸ ಮಾಡುವೆನು. ಸರಕಾರಿ ಆಸ್ಪತ್ರೆ ಸರಿಯಾಗಿ ನಡೆಯುತ್ತದೋ ? ವೈದ್ಯರು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೋ ? ಸಿಬ್ಬಂದಿ ಇದ್ದಾರೊ ? ಜನರ ಸಹಕಾರ ಇದೆಯೋ ? ಅಲ್ಲಿ ವೈದ್ಯರಿಗೆ, ಸಿಬ್ಬಂದಿಗೆ ನಿರ್ಬಯವಾಗಿ ಕರ್ತವ್ಯ ವ್ಯವಸ್ಥೆ ಇದೆಯೋ ? ಅಲ್ಲಿನ ಸ್ವಚ್ಛತೆ ಹೇಗಿದೆ ? ಎನ್ನುವುದನ್ನು ತಿಳಿಯಬೇಕಾದರೆ ಮಧ್ಯರಾತ್ರಿ ಆಸ್ಪತ್ರೆಗೆ ಹೋಗಬೇಕು. ಈಗಾಗಲೇ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಮೊದಲ ಸಭೆ ನಡೆಸಿರುವೆನು. ಮಂಗಳೂರಿನಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿರುವ ತಳಮಟ್ಟದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಪ್ರತಿಯೊಂದು ಸರಕಾರಿ ಆಸ್ಪತ್ರೆಗಳಲ್ಲೂ ವೈದ್ಯರು ತಮ್ಮ ಕರ್ತವ್ಯವನ್ನು ನಿಗದಿತ ಸಮಯದಲ್ಲಿ ಸರಿಯಾಗಿ ನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳನ್ನು ಹೋಗಿ ನೋಡುವುದು ಕೇವಲ ಸಚಿವರ ಮಾತ್ರ ಜವಾಬ್ದಾರಿ ಯಲ್ಲ. ಜಿಲ್ಲೆ ತಾಲೂಕು ಆರೋಗ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೊಳಪಟ್ಟ ಸರಕಾರಿ ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಶ್ರಮಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಉತ್ತಮ ಕಟ್ಟಡ, ವೈದ್ಯರು, ಸಾಕಷ್ಟು ಸಿಬ್ಬಂದಿ ಇರುವ ಆಸ್ಪತ್ರೆಯಲ್ಲಿ ಹೊರಗಿನವರಿಗೆ ಜವಾಬ್ದಾರಿ ನೀಡಲಾಗುವು ದಿಲ್ಲ. ಆದರೆ ಕೆಲವು ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯ ಇದ್ದರೂ ಸಾಕಷ್ಟು ವೈದ್ಯರು ಇರದಿದ್ದರೆ ಹೊರಗಿನವರ ಸಹಕಾರ ವನ್ನು ಪಡೆಯಲಾಗುತ್ತದೆ. ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಮೂವರು ವೈದ್ಯರು ಅಗತ್ಯ ಮಕ್ಕಳ ತಜ್ಞರು, ಹೆರಿಗೆ, ಅರಿವಳಿಕೆ ತಜ್ಞರು ಇರಬೇಕಾಗುತ್ತದೆ. ಸಮುದಾಯ ಆಸ್ಪತ್ರೆಯಲ್ಲೂ ಮೂವರು ತಜ್ಞರು ಇರಬೇಕಾಗುತ್ತದೆ.ಒಂದು ವೇಳೆ ಅಲ್ಲಿ ವೈದ್ಯರು ಇರದಿದ್ದರೆ ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಹೊರಗಿನ ವೈದ್ಯರ ಉಚಿತ ನೆರವನ್ನು ಪಡೆದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಉಳ್ಳಾಲದಲ್ಲಿ ಅಷ್ಟು ದೊಡ್ಡ ಆಸ್ಪತ್ರೆ ನಿಆರ್ಮಣವಾಗಿ ಅಲ್ಲಿ ಮೂಲಭೂತ ಸೌಕರ್ಯಗಳಿದ್ದರೂ, ವೈದ್ಯರ ಕೊರತೆ ಯಿಂದಾಗಿ ಒಂದೊಮ್ಮೆ ರೋಗಿಗಳು ಬರುತ್ತಿರಲಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಹಿಂದೆ ತಾನು ಆರೋಗ್ಯ ಸಚಿವನಾಗಿ ದ್ದಾಗ ರಾಜ್ಯಮಟ್ಟದಲ್ಲಿ ನಿಯಮ ರೂಪಿಸಿ ಆ ಆಸ್ಪತ್ರೆಯ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಲಾಗಿತ್ತು. ಈಗ ಅಲ್ಲಿ ಎಲ್ಲ ಸೌಲಭ್ಯಗಳು ಇವೆ, ವೈದ್ಯರ ಕೊರತೆಯೂ ಇಲ್ಲ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಸೇವೆ ಲಭ್ಯವಾಗಬೇಕು. ವೈದ್ಯರ ಸಮಸ್ಯೆ ಇರುವಲ್ಲಿ ಪಕ್ಕದ ಮೆಡಿಕಲ್ ಕಾಲೇಜುಗಳ ವೈದ್ಯರ ನೆರವು ಪಡೆಯಲಾಗುತ್ತದೆ. ಇಲ್ಲಿ ಸರಕಾರಿ, ಖಾಸಗಿ ವೈದ್ಯರು ಎನ್ನುವುದು ಮುಖ್ಯವಲ್ಲ. ಜನರಿಗೆ ಉಚಿತ ಸೇವೆ ಲಭ್ಯವಾಗಬೇಕು ಎಂದರು.
ಸರಕಾರಿ ಆಸ್ಪತ್ರೆಗಳಿಗೆ ಖಾಲಿ ಇರುವ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಒಂದೂವರೆ ಲಕ್ಷ ರೂ. ಸಂಬಳ ಕೊಟ್ಟರೂ ವೈದ್ಯರು ಬರುವುದಿಲ್ಲ. ಒಂದು ವೇಳೆ ವೈದ್ಯರು ಬಾರದಿದ್ದರೆ ಅವರನ್ನು ಕುತ್ತಿಗೆ ಕೈಹಾಕಿ ಎಳೆದುಕೊಂಡು ಬರಲು ಸಾಧ್ಯವಾಗುತ್ತದೋ ಎಂದು ಪ್ರಶ್ನಿಸಿದರು ?
ಗುಂಡೂರಾವ್, ಜಮೀರ್ಗೆ ಮುಂದೆ ಸಚಿವ ಸ್ಥಾನ ಸಿಗಬಹುದು: ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ತಪ್ಪಿದ ಬಗ್ಗೆ ಅಸಮಾಧಾನ ಇರುವ ಬಗ್ಗೆ, ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಕೊಡದ ಬಗ್ಗೆಯೂ ಪ್ರಶ್ನಿಸಿದಾಗ ‘ ನನಗೆ ಅದು ಗೊತ್ತಿಲ್ಲ. ಮುಂದೆ ಸಚಿವ ಸಂಪುಟ ವಿಸ್ತರಣೆ ಇದೆ. ಆ ವೇಳೆ ಹೈಕಮಾಂಡ್ ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನಿಸುತ್ತಾರೆ. ನಾನು ಈ ಕ್ಷೇತ್ರಕ್ಕೆ ರಾಜಕೀಯ ಮಾತನಾಡಲು ಬಂದಿಲ್ಲ ಎಂದು ನುಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಲು ಯುಟಿ ಖಾದರ್ಗೆ ಆಸಕ್ತಿ ಇಲ್ಲ ಅವರು ಬೇರೆ ಜಿಲ್ಲೆಯ ಉಸ್ತುವಾರಿ ಸಚಿವ ನಾಗಲು ಬಯಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯ ಬಗ್ಗೆ ಸುದ್ದಿಗಾರರು ಸಚಿವ ಖಾದರ್ ಅವರ ಗಮನ ಸೆಳೆದಾಗ ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ಮುಖ್ಯ ಮಂತ್ರಿ ತೀರ್ಮಾನಿಸುತ್ತಾರೆ. ಅವರು ಯಾವ ಜಿಲ್ಲೆಯ ಉಸ್ತುವಾರಿ ಕೊಡುತ್ತಾರೊ ಆ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಹಿಂದೆ ಕೋಲಾರ, ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಸೇವೆ ಸಲ್ಲಿಸಿದ್ದೆ. ಯಾರಾದರೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸಲು ಆಸಕ್ತಿ ವಹಿಸಿದರೆ ನನ್ನದೇನು ಅಭ್ಯಂತರವಿಲ್ಲ. ನನ್ನ ಸಂಪೂರ್ಣ ಸಹಕಾರ ಇದೆ. ನಾನು ಸಿಎಂ ವಹಿಸಿಕೊಡುವ ಜಿಲ್ಲೆಯ ಉಸ್ತುವಾರಿ ಸಚಿವನಾ ಗುವೆನು. ಬೇರೆ ಜಿಲ್ಲೆಯ ಸಚಿವನಾದರೆ ಅಲ್ಲಿನ ಸಂಸ್ಕೃತಿಯ ಪರಿಚಯ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಜಯರಾಜ್ ಎಚ್ ಸೋಮಸುಂದರಮ್, ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









