ಮಂಗಳೂರು: ನಗರದ ಜೀವನಾಡಿಯಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಳೆದ ಏಳು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕೇವಲ 4.47 ಮೀಟರ್ಗೆ ಇಳಿಕೆಯಾಗಿದ್ದು, ಬಿಸಿಲಿನ ತಾಪ ಮತ್ತು ಮಳೆಯ ಅಭಾವದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. 2017ರಲ್ಲಿ ನೀರಿನ ಮಟ್ಟ 4.18 ಮೀಟರ್ ಇಳಿಕೆಯಾಗಿದ್ದನ್ನು ಹೊರತುಪಡಿಸಿದರೆ, ಇದೀಗ ಅತಿ ಕಡಿಮೆ ನೀರಿನ ಸಂಗ್ರಹ ದಾಖಲಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪೂರ್ವ ಮುಂಗಾರು ಮಳೆ ತೀರಾ ಕಡಿಮೆಯಾಗಿದ್ದು, ಮಾರ್ಚ್ ಅಂತ್ಯಕ್ಕೇ ನದಿಯ ಒಳಹರಿವು ಸ್ಥಗಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಮುನ್ನೆಚ್ಚರಿಕಾ ಕ್ರಮವಾಗಿ ಮೇ 1ರಿಂದ ನಗರಕ್ಕೆ ನೀರಿನ ರೇಷನಿಂಗ್ ಘೋಷಿಸಿದೆ. ಇದರಂತೆ ಮಂಗಳೂರು ನಗರ ಮತ್ತು ಸುರತ್ಕಲ್ ಭಾಗಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ಸದ್ಯದ ನೀರಿನ ಲೆಕ್ಕಾಚಾರದ ಪ್ರಕಾರ, ನೀರಿನ ಮಟ್ಟ 4.50 ಮೀಟರ್ ಇದ್ದರೆ ಸುಮಾರು 30 ದಿನಗಳ ಕಾಲ ನಗರಕ್ಕೆ ನೀರು ಪೂರೈಸಲು ಸಾಧ್ಯವಿದೆ. ಅದೃಷ್ಟವಶಾತ್ ಎಂ.ಆರ್.ಬಿಳಿಯೂರು ಮತ್ತು ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂಗಳಲ್ಲಿ ನೀರಿನ ಸಂಗ್ರಹ ಇರುವುದರಿಂದ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. 2025ರಲ್ಲಿ ಎ.25ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60.2ಮಿ.ಮೀ. ವಾಡಿಕೆ ಮಳೆಯಲ್ಲಿ 119.7 ಮಿ.ಮೀ. ಮಳೆ ಸುರಿದಿತ್ತು. ಇದೇ ಕಾರಣಕ್ಕೆ ತುಂಬೆಯಲ್ಲಿ ನೀರಿನ ಮಟ್ಟ 5.35ಮೀ. ಇತ್ತು. ಆದರೆ, ಈ ವರ್ಷ ಕೇವಲ 41.2ಮೀ. ಮಳೆಯಾಗಿದೆ. ಇದೇ ಕಾರಣಕ್ಕೆ ನೀರಿನ ಒಳ ಹರಿವು ಕೂಡ ಮಾರ್ಚ್ ಅಂತ್ಯಕ್ಕೇ ನಿಂತಿದ್ದು, ಸದ್ಯ 4.47ಮೀ.ನಷ್ಟು ಮಾತ್ರ ನೀರಿನ ಮಟ್ಟ ಇದೆ.
2017ರಲ್ಲಿ ತುಂಬೆ ನೀರಿನ ಮಟ್ಟ 4.18 ಮೀ. ಇತ್ತು. ಇದಾದ ಬಳಿಕ 2025ರ ವರೆಗೆ ಇಷ್ಟೊಂದು ಇಳಿಕೆ ಕಂಡಿರಲಿಲ್ಲ. ಆದರೆ, ಸದ್ಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಬಳಕೆಯೂ ಹೆಚ್ಚುತ್ತಿದೆ. ಮಂಗಳೂರು ನಗರಕ್ಕೆ ದಿನಂಪ್ರತಿ 160 ಎಂಎಲ್ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕ ಹಾಕಿದಾಗ 4 ಮೀ.ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದು. 4.50 ಮೀ. ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ ಮತ್ತು 30 ದಿನಗಳವರೆಗೆ ಪೂರೈಕೆ ಮಾಡಬಹುದು. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀಟರ್ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. ಇಷ್ಟಾದರೂ ಎಎಂಆರ್. ಬಿಳಿಯೂರು ಮತ್ತು ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂಗಳಲ್ಲಿ ನೀರುಸಂಗ್ರಹವಿರುವುದರಿಂದ ಸಮಸ್ಯೆಯ ತೀವ್ರತೆ ತಗ್ಗಲಿದೆ.
ಮಳೆ ಕೈಕೊಟ್ಟರೆ ಎದುರಾಗಬಹುದಾದ ಭೀಕರ ಜಲಕ್ಷಾಮವನ್ನು ತಡೆಗಟ್ಟಲು ಸಾರ್ವಜನಿಕರು ನೀರಿನ ಮಿತ ಬಳಕೆಗೆ ಮುಂದಾಗಬೇಕು ಎಂದು ಪಾಲಿಕೆ ಮನವಿ ಮಾಡಿದೆ. ಕುಡಿಯುವ ನೀರನ್ನು ವಾಹನ ತೊಳೆಯಲು, ತೋಟಗಾರಿಕೆಗೆ ಅಥವಾ ಪ್ರಾಣಿಗಳನ್ನು ತೊಳೆಯಲು ಬಳಸದೆ ಕೇವಲ ಅನಿವಾರ್ಯ ಉದ್ದೇಶಗಳಿಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಮೇ ಅಂತ್ಯಕ್ಕೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಅನಿವಾರ್ಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









