ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಮಾನಕಾರಿ ಕವನ ವಾಚಿಸಿ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ನಡೆಗೆ ಶಾಸಕ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಈ ರೀತಿ ವೈಯಕ್ತಿಕ ಹಾಗೂ ಅಸಭ್ಯವಾಗಿ ಮಾತನಾಡುವುದು ರಾಜಕೀಯ ಸಂಸ್ಕೃತಿಗೆ ಒಪ್ಪುವಂಥದ್ದಲ್ಲ ಮತ್ತು ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.
ದೇಶದ ಅಭಿವೃದ್ಧಿ ಹಾಗೂ ಜನಸೇವೆಗಾಗಿ ನಿರಂತರ ಶ್ರಮಿಸುತ್ತಿರುವ ಪ್ರಧಾನಮಂತ್ರಿಯವರ ಆಡಳಿತದಲ್ಲಿ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಹೆಮ್ಮೆಯ ಸ್ಥಾನ ಗಳಿಸಿದೆ. ಸಂಸತ್ತಿನಲ್ಲಿ ಮಹಿಳೆಯರ ಹಕ್ಕಿಗಾಗಿ ಮಸೂದೆ ಮಂಡಿಸಿದ ಸಾಧನೆ ಮೋದಿಯವರದ್ದು. ಅದನ್ನು ಬೆಂಬಲಿಸುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ನಾಯಕರು, ಈಗ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿರುವುದು ಅಸಭ್ಯ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದರು. ಪ್ರಧಾನಿಯವರ ವಿರುದ್ಧ ಇಂತಹ ದಾಳಿ ನಡೆಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಚಿವ ತಂಗಡಗಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಡಾ. ಭರತ್ ಶೆಟ್ಟಿ ಟೀಕಿಸಿದರು. ಆಡಳಿತದಲ್ಲಿನ ಹಿನ್ನಡೆಯನ್ನು ಮರೆಮಾಚಲು ಕಾಂಗ್ರೆಸ್ ನಾಯಕರು ಕೆಳಮಟ್ಟದ ರಾಜಕೀಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









