ಮಂಗಳೂರು : ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಹಾಗೂ ಖಾಯಂ ಪೀಠವನ್ನು ಸ್ಥಾಪಿಸಬೇಕೆಂಬ ದಶಕಗಳ ಬೇಡಿಕೆಗೆ ಈಗ ಮಹತ್ವದ ಜಯ ಸಿಕ್ಕಿದೆ. ಈ ಕುರಿತು ಮಾಹಿತಿ ನೀಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಈ ಬೇಡಿಕೆಯ ಅನಿವಾರ್ಯತೆಯನ್ನು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಸ್ಥಳ ಪರಿಶೀಲನೆಗಾಗಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಆಶಾದಾಯಕ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪೀಠ ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಮುಖ್ಯ ನ್ಯಾಯಾಧೀಶರು ಪರಿಶೀಲಿಸಲಿದ್ದಾರೆ. ಪ್ರಸ್ತುತ ಈ ಕಟ್ಟಡವು ಸುಮಾರು 5.5 ಎಕರೆ ವಿಸ್ತೀರ್ಣದಲ್ಲಿದ್ದು, ನಾಲ್ಕು ಅಂತಸ್ತಿನ ಸುಸಜ್ಜಿತ ಸೌಲಭ್ಯವನ್ನು ಹೊಂದಿದೆ. ಹೈಕೋರ್ಟ್ ಪೀಠಕ್ಕೆ ಬೇಕಾದ ಕೋರ್ಟ್ ಹಾಲ್ಗಳು ಮತ್ತು ದಾಖಲೆ ಪತ್ರಗಳ ಸಂಗ್ರಹಣೆಗೆ ಈ ಜಾಗ ಸೂಕ್ತವಾಗಿದೆ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಸದರಿ ಕಟ್ಟಡವನ್ನು ಹೈಕೋರ್ಟ್ ಪೀಠಕ್ಕಾಗಿ ಮೀಸಲಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೆ, ಮುಡಿಪುವಿಗೆ ಜೈಲು ಸ್ಥಳಾಂತರಗೊಂಡ ನಂತರ ಆ ಜಾಗವೂ ಲಭ್ಯವಾಗಲಿದ್ದು, ಸದ್ಯಕ್ಕೆ ಹಳೆ ಜಿಲ್ಲಾಧಿಕಾರಿ ಕಚೇರಿಯೇ ಸೂಕ್ತ ಆಯ್ಕೆಯಾಗಿದೆ.
ಈ ಯಶಸ್ಸು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಾಗಿ ವಕೀಲರ ಸಂಘ, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಮತ್ತು ಜನಪ್ರತಿನಿಧಿಗಳ ಸುದೀರ್ಘ ಹೋರಾಟದ ಫಲವಾಗಿದೆ. ಪೋಸ್ಟ್ಕಾರ್ಡ್ ಮತ್ತು ಇಮೇಲ್ ಚಳವಳಿಯ ಮೂಲಕ ನ್ಯಾಯಾಧೀಶರ ಗಮನ ಸೆಳೆಯಲಾಗಿದ್ದು, ಕಲಬುರಗಿ ಮತ್ತು ಧಾರವಾಡ ಮಾದರಿಯಲ್ಲಿ ಮಂಗಳೂರಿನಲ್ಲೂ ಸಂಚಾರಿ ಪೀಠ ಆರಂಭವಾಗುವ ದೃಢ ವಿಶ್ವಾಸ ಮೂಡಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಘವೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ್ ಮತ್ತು ಹಿರಿಯ ವಕೀಲರು ಭಾಗವಹಿಸಿ ಈ ಐತಿಹಾಸಿಕ ನಡೆಯನ್ನು ಸ್ವಾಗತಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









