ಮಂಗಳೂರು : ಮಂಗಳೂರಿನ ಹೊರವಲಯದ ಮಳವೂರು-ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಫಲ್ಗುಣಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಬುಧವಾರ ನದಿಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. ಒಂದು ಕಾಲದಲ್ಲಿ ಜೀವನದಿಯಾಗಿದ್ದ ಫಲ್ಗುಣಿ ಈಗ ವಿಷಕಾರಿ ತ್ಯಾಜ್ಯದ ಕಾರಣದಿಂದ ‘ಜಲಚರಗಳ ಸ್ಮಶಾನ’ವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿಯ ಹೊತ್ತಿಗೆ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ವಿಷಕಾರಿ ಅಂಶಗಳ ತೀವ್ರತೆಗೆ ಜಲಚರಗಳು ಉಸಿರುಗಟ್ಟಿ ಸಾವನ್ನಪ್ಪಿವೆ.
ಸುತ್ತಮುತ್ತಲಿನ ಕೈಗಾರಿಕೆಗಳಿಂದ ಸಂಸ್ಕರಿಸದ ವಿಷಕಾರಿ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಮಾಲಿನ್ಯ ಕೇವಲ ನದಿಗೆ ಸೀಮಿತವಾಗದೆ, ಹತ್ತಿರದ ಮನೆಗಳ ಬಾವಿ ನೀರಿಗೂ ಹರಡಿದ್ದು ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬಜ್ಪೆ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚನಾಡಿ ಒಳಚರಂಡಿ ಸಂಸ್ಕರಣಾ ಘಟಕದಿಂದ (STP) ಸಂಸ್ಕರಿಸದ ತ್ಯಾಜ್ಯ ನೀರನ್ನು ನದಿಗೆ ಬಿಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಈಗಾಗಲೇ ನದಿ ಮತ್ತು ಬಾವಿಗಳ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪ್ರಯೋಗಾಲಯದ ವರದಿಯ ನಂತರ ಮಾಲಿನ್ಯದ ನಿಖರ ಕಾರಣ ತಿಳಿಯಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









