ಮಂಗಳೂರು : ಎಮ್ಮೆಕೆರೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಬ್ಯಾರೀಸ್ ಫೆಸ್ಟಿವಲ್ ಕಾರ್ಯಕ್ರಮವು ಮುಕ್ತಾಯಗೊಂಡು ಹಲವು ದಿನಗಳೇ ಕಳೆದಿದ್ದರೂ, ಸಂಘಟಕರು ಅದರ ಅವಶೇಷಗಳನ್ನು ತೆರವುಗೊಳಿಸದೆ ಬೇಜವಾಬ್ದಾರಿ ಮೆರೆದಿದ್ದಾರೆ. ಪಾಂಡೇಶ್ವರ ಮುಖ್ಯ ರಸ್ತೆಯ ಬಳಿ ಅದ್ದೂರಿಯಾಗಿ ನಿರ್ಮಿಸಲಾಗಿದ್ದ ಸ್ವಾಗತ ಗೋಪುರವನ್ನು ಕಾರ್ಯಕ್ರಮದ ನಂತರ ಸಂಘಟಕರು ಅರ್ಧಕ್ಕೆ ಕಿತ್ತು ರಸ್ತೆ ಬದಿಯಲ್ಲೇ ಎಸೆದು ಹೋಗಿದ್ದಾರೆ. ಈ ಕಬ್ಬಿಣದ ಚೌಕಟ್ಟುಗಳು ಮತ್ತು ಬ್ಯಾನರ್ನ ಸಾಮಗ್ರಿಗಳು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಭಾರೀ ಅಡ್ಡಿಯುಂಟುಮಾಡುತ್ತಿವೆ.
ನಗರದ ಹೃದಯಭಾಗದಲ್ಲಿ ಪಾದಚಾರಿಗಳು ನಡೆದಾಡಲು ಪರದಾಡುವಂತಿದ್ದರೂ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟಿರುವ ಈ ಸಾಮಗ್ರಿಗಳಿಂದಾಗಿ ರಾತ್ರಿ ವೇಳೆಯಲ್ಲಿ ಓಡಾಡುವ ಜನರಿಗೆ ಅಪಘಾತದ ಭೀತಿ ಎದುರಾಗಿದೆ. ನಗರದ ಅಂದವನ್ನು ಕೆಡಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಗೆ ಕುತ್ತು ತಂದಿರುವ ಈ ಸ್ವಾಗತ ಗೋಪುರವನ್ನು ತೆರವುಗೊಳಿಸಲು ಅಧಿಕಾರಿಗಳು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಈ ಅವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ರಸ್ತೆ ಬಳಸಿ ಲಾಭ ಮಾಡಿಕೊಳ್ಳುವ ಸಂಘಟಕರು, ಕಾರ್ಯಕ್ರಮ ಮುಗಿದ ನಂತರ ಸ್ವಚ್ಛತೆಯ ಬಗ್ಗೆ ಕಾಳಜಿ ತೋರದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಈ ಸ್ವಾಗತ ಗೋಪುರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









