ಮಂಗಳೂರು : ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ಮಾಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಹನ್ನೊಂದು ಮಂದಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದನಿನಗರದ ನಿವಾಸಿ ಜುನೈದ್ ಹಾಗೂ ಆತನ ಹತ್ತು ಮಂದಿ ಸಹಚರರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಸ್ಪೀಕರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸೀನ್ ಇನಾಮದಾರ್ ನೀಡಿದ ದೂರಿನನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಳೆದ ಮೇ 7ರಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸ್ಪೀಕರ್ ಯು.ಟಿ. ಖಾದರ್ ಅವರು ಉಳ್ಳಾಲದ ಮಾಸ್ತಿಕಟ್ಟೆಯ ರೆಸಾರ್ಟ್ವೊಂದರಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಜುನೈದ್ ಮತ್ತು ಆತನ ಗುಂಪು ಏಕಾಏಕಿ ಸ್ಪೀಕರ್ ಅವರತ್ತ ನುಗ್ಗಲು ಪ್ರಯತ್ನಿಸಿದೆ. ಭದ್ರತಾ ಸಿಬ್ಬಂದಿ ಸಮಯದ ಅಭಾವವನ್ನು ಉಲ್ಲೇಖಿಸಿ ಭೇಟಿಗೆ ನಿರಾಕರಿಸಿದಾಗ, ಸಿಬ್ಬಂದಿಯನ್ನೇ ತಳ್ಳಿ ಮುನ್ನುಗ್ಗಿದ ಗುಂಪು ಸ್ಪೀಕರ್ ಅವರನ್ನು ಫೇರಾವ್ ಹಾಕಿ ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಕುತ್ತಾರಿನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಈ ಗುಂಪು, ಘಟನೆಯ ವೀಡಿಯೋವನ್ನು ಆಕ್ಷೇಪಾರ್ಹ ಬರಹಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕುತ್ತಾರಿನ ಈ ವೃತ್ತದ ಇತಿಹಾಸವನ್ನು ಗಮನಿಸಿದರೆ, ವರ್ಷಗಳ ಹಿಂದೆ ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಬಜರಂಗದಳದ ವತಿಯಿಂದ ಕೊರಗಜ್ಜನ ಮುಟ್ಟಾಳೆ ಮತ್ತು ದಂಟೆಯ ಪ್ರತಿಕೃತಿಯ ಸಣ್ಣ ವೃತ್ತವನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಈ ಸಣ್ಣ ವೃತ್ತವನ್ನು ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ನೂತನ ವೃತ್ತವನ್ನು ನಿರ್ಮಿಸಲು ಮುಂದಾಗಿದೆ. ಆದರೆ, ಈ ನಿರ್ಮಾಣಕ್ಕೆ ಮದನಿನಗರದ ಕೆಲವು ಮುಸ್ಲಿಂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಪೀಕರ್ ಅವರ ಭದ್ರತಾ ವ್ಯವಸ್ಥೆಯಲ್ಲೂ ಲೋಪ ಉಂಟಾಗಿದೆಯೇ ಎಂಬ ಪ್ರಶ್ನೆಗಳು ಮೂಡಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









