ಮಂಗಳೂರು : ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಅತ್ಯಂತ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಖ್ಯಾತ ಕಲಾವಿದ ಸುಂದರ ರೈ ಮಂದಾರ ಮತ್ತು ತಂಡದವರು ಗಂಭೀರ ಆರೋಪ ಮಾಡಿದ್ದಾರೆ. ಕೇಬಲ್ ವಾಹಿನಿಯೊಂದರಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿನ ಪಾತ್ರವೊಂದು ತನ್ನನ್ನು ಉದ್ದೇಶಿಸಿ ಮಾಡಲಾಗಿದೆ ಎಂದು ಭಾವಿಸಿದ ತಿಮರೋಡಿ ಅವರು, ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಲಾವಿದರು, ತಾವು ಸಮಾಜದ ವಿಮರ್ಶೆಯನ್ನು ಸ್ವೀಕರಿಸಲು ಸಿದ್ಧರಿದ್ದೇವೆ, ಆದರೆ ಹೆತ್ತವರು ಮತ್ತು ಮನೆಯ ಹೆಣ್ಣುಮಕ್ಕಳನ್ನು ಎಳೆದು ತಂದು ಮರ್ಯಾದೆಗೇಡಿತನದಿಂದ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಾಸ್ಯ ನಾಟಕಕ್ಕೂ ಧರ್ಮಸ್ಥಳದ ಘಟನೆಗಳಿಗೂ ಅಥವಾ ತಿಮರೋಡಿ ಅವರಿಗೂ ಯಾವುದೇ ನೇರ ಸಂಬಂಧವಿಲ್ಲದಿದ್ದರೂ, ಸುಳ್ಳಿನ ಮೂಲಕ ತೇಜೋವಧೆ ಮಾಡುವ ಕಥಾಹಂದರವನ್ನು ತಮಗೇ ಅನ್ವಯಿಸಿಕೊಂಡು ಅವರು ಈ ವರ್ತನೆ ತೋರಿದ್ದಾರೆ ಎಂದು ಕಲಾವಿದರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರ ರೈ ಮಂದಾರ ಅವರು, ಈ ದೂರು ನೀಡುವ ಹಿಂದೆ ಯಾರದ್ದೇ ಪ್ರಚೋದನೆ ಇಲ್ಲ, ಕೇವಲ ಸ್ವಯಂ ಮರ್ಯಾದೆಗಾಗಿ ಪೊಲೀಸರ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು. ನಿಂದನೆಯ ಆಡಿಯೋ ತುಣುಕುಗಳು ಲಭ್ಯವಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಮತ್ತೊಬ್ಬ ಕಲಾವಿದ ದಿನೇಶ್ ಕೋಡಪದವು ಮಾತನಾಡಿ, ತಿಮರೋಡಿ ಅವರ ಮೇಲೆ ಈ ಹಿಂದೆ ಇದ್ದ ಗೌರವ ಈಗ ಕಳೆದುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನರು ಬಳಸುವ ‘ಪೆದಂಬು’ (ಮೂರ್ಖ) ಪದಕ್ಕಿಂತಲೂ ಕೆಟ್ಟದಾದ ಶಬ್ದಭಂಡಾರ ನಮ್ಮಲ್ಲೂ ಇದೆ, ಆದರೆ ಕಲಾವಿದರಾಗಿ ನಾವು ಸಂಯಮ ಕಾಯ್ದುಕೊಂಡಿದ್ದೇವೆ ಎಂದು ಹೇಳಿದ ಅವರು, ನಾಲಗೆಯನ್ನೇ ಜೀವನೋಪಾಯವಾಗಿಸಿಕೊಂಡ ನಮಗೆ ಇಂತಹ ನಿಂದನೆ ಕೇಳುವ ದೌರ್ಭಾಗ್ಯ ಬಂದಿದೆ ಎಂದು ಕಿಡಿಕಾರಿದರು. ಈ ಘಟನೆಯು ಕರಾವಳಿಯ ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಕಲಾವಿದರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ಸುಂದರ ರೈ ಮಂದಾರ ಮತ್ತು ದಿನೇಶ್ ಶೆಟ್ಟಿಗಾರ್ ಅವರ ತಾಯಿಯ ಹೆಸರಿನಲ್ಲಿ ಈ ದೂರುಗಳನ್ನು ದಾಖಲಿಸಲಾಗಿದ್ದು, ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹೋರಾಟಗಾರರೊಬ್ಬರು ಕಲಾವಿದರ ಖಾಸಗಿ ಬದುಕಿನ ಮೇಲೆ ಈ ರೀತಿ ದಾಳಿ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









