ಬೆಳ್ತಂಗಡಿ : ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪರಿಸರದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ, ಕೇರಳ ಮೂಲದ ಕುಖ್ಯಾತ ಶಂಕಿತನ ಪತ್ತೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕಳ್ಳತನದ ಜಾಲದಲ್ಲಿ ಸಕ್ರಿಯವಾಗಿರುವ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ. ಶಂಕಿತನನ್ನು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ತಂಗಚ್ಚ (ಅಲಿಯಾಸ್ ಮ್ಯಾಧ್ಯೂ, ಅಲಿಯಾಸ್ ಬಶೀರ್) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಈಗಾಗಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಲ್ಲಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಕಳೆದ 48 ಗಂಟೆಗಳ ಅವಧಿಯಲ್ಲಿ ವರದಿಯಾಗಿರುವ ಕಳ್ಳತನ ಪ್ರಕರಣಗಳ ಹಿಂದೆ ಈತನ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಬಲವಾದ ಅನುಮಾನಗಳಿದ್ದು, ಆತನ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾರ್ವಜನಿಕರಿಗೆ ಈ ಶಂಕಿತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಇಲಾಖೆಯನ್ನು ಸಂಪರ್ಕಿಸಲು ಕೋರಲಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆ (08251-251055, 9480805362), ಬೆಳ್ತಂಗಡಿ ಪೊಲೀಸ್ ಠಾಣೆ (08256-232093, 9480805370), ಪುತ್ತೂರು ಪೊಲೀಸ್ ಠಾಣಾ ಉಪನಿರೀಕ್ಷಕರು (08251-230555, 9480805361) ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ (9480805300 / 0824 2220500) ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಮಾಹಿತಿ ನೀಡುವ ಸಾರ್ವಜನಿಕರ ವಿವರ ಹಾಗೂ ಗುರುತನ್ನು ಅತ್ಯಂತ ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









