ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಶವ ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ ಸುದೀರ್ಘ ಕಾರ್ಯಾಚರಣೆಯ ಬಿಲ್ಗಳು ಇನ್ನೂ ಪಾವತಿಯಾಗದೆ ಉಳಿದಿವೆ. ಈ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಬಡ ಕಾರ್ಮಿಕರು, ಜೆಸಿಬಿ ಮಾಲೀಕರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಬರಬೇಕಾದ ಸುಮಾರು 2 ಲಕ್ಷ ರೂಪಾಯಿಗಳ ಮೊತ್ತವು ತಾಂತ್ರಿಕ ಕಾರಣಗಳಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಬಾಕಿ ಉಳಿದಿದ್ದು, ಹಣಕ್ಕಾಗಿ ಸಂಬಂಧಪಟ್ಟವರನ್ನು ಅಂಗಲಾಚುವಂತಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬಾತ ನೀಡಿದ ಮಾಹಿತಿಯ ಮೇರೆಗೆ ತಂಡವು ಸುಮಾರು 17 ವಿವಿಧ ಸ್ಥಳಗಳಲ್ಲಿ ಹೊಂಡಗಳನ್ನು ತೋಡಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿತ್ತು.
ಈ ಬೃಹತ್ ಕಾರ್ಯಾಚರಣೆಗಾಗಿ ಸತತ ಹತ್ತು ದಿನಗಳ ಕಾಲ ಜೆಸಿಬಿ ಯಂತ್ರಗಳನ್ನು ಬಳಸಲಾಗಿತ್ತು. ಯಂತ್ರದ ಬಾಡಿಗೆ ಮತ್ತು ಕೆಲಸದ ಮೊತ್ತ ಸೇರಿ ಜೆಸಿಬಿ ಮಾಲೀಕರು 71,500 ರೂ.ಗಳ ಬಿಲ್ ಸಲ್ಲಿಸಿದ್ದರೂ, ಈವರೆಗೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಇದರೊಂದಿಗೆ ಎಸ್ಐಟಿ ಅಧಿಕಾರಿಗಳಿಗೆ ನೆರವಾಗಲು ಪ್ರತಿದಿನ 10 ರಿಂದ 12 ದಿನಗೂಲಿ ಕಾರ್ಮಿಕರು ಬೆವರು ಸುರಿಸಿದ್ದರು. ಇವರಿಗೆ ನೀಡಬೇಕಾದ ಒಟ್ಟು ಕೂಲಿ ಮೊತ್ತವು 80,000 ರೂಪಾಯಿಗಳನ್ನು ದಾಟಿದ್ದು, ದಿನದ ದುಡಿಮೆಯನ್ನೇ ನಂಬಿ ಜೀವನ ನಡೆಸುವ ಈ ಬಡ ಕುಟುಂಬಗಳು ಈಗ ತಮ್ಮ ನ್ಯಾಯಬದ್ಧ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಶೋಧ ಕಾರ್ಯದ ವೇಳೆ ಎಸ್ಐಟಿ ಕ್ಯಾಂಪ್ಗಾಗಿ ಹಾಕಲಾಗಿದ್ದ ಶಾಮಿಯಾನದ ಬಾಡಿಗೆ, ಹೂತು ಹಾಕಿದ ಶವಗಳ ಪತ್ತೆಗೆ ಬಳಸಿದ ಗುದ್ದಲಿ-ಹಾರೆಗಳಂತಹ ಉಪಕರಣಗಳ ಖರೀದಿ ವೆಚ್ಚ, ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಒದಗಿಸಲಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಾರಿಗೆಗಾಗಿ ಬಳಸಿದ ವಾಹನಗಳ ಬಾಡಿಗೆ ಕೂಡ ಇನ್ನೂ ಪಾವತಿಯಾಗಿಲ್ಲ. ಈ ಎಲ್ಲಾ ಸಣ್ಣಪುಟ್ಟ ಬಿಲ್ಗಳನ್ನು ಒಗ್ಗೂಡಿಸಿದರೆ ಒಟ್ಟು ಬಾಕಿ ಮೊತ್ತ 2 ಲಕ್ಷ ರೂ. ತಲುಪಿದೆ. ಸರ್ಕಾರದ ಮಟ್ಟದಲ್ಲಿ ನಡೆದ ಇಷ್ಟು ದೊಡ್ಡ ತನಿಖಾ ಕಾರ್ಯಾಚರಣೆಯ ವೆಚ್ಚವನ್ನು ಭರಿಸಲು ವಿಳಂಬ ಮಾಡುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









