ಮಂಗಳೂರು : ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲು ಸರ್ಕಾರ ಕೈಗೊಂಡಿರುವ ದೂರದೃಷ್ಟಿಯ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ವಿಸ್ತರಿಸುವ ಉದ್ದೇಶದಿಂದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇದರಿಂದಾಗಿ ಹೆಚ್ಚುವರಿ ಸಿಬ್ಬಂದಿ, ತಜ್ಞ ವೈದ್ಯರು ಹಾಗೂ ಅತ್ಯಾಧುನಿಕ ಉಪಕರಣಗಳು ಲಭ್ಯವಾಗಲಿದ್ದು, ಸ್ಥಳೀಯ ಮಟ್ಟದಲ್ಲೇ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ಸುಧಾರಿತ ರೋಗನಿರ್ಣಯ ಸೌಲಭ್ಯಗಳು ಸಿಗುವಂತಾಗಲಿದೆ.
ಈ ಯೋಜನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಆರೋಗ್ಯ ಕೇಂದ್ರ ಹಾಗೂ ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ಒಪ್ಪಂದದ ಮೂಲಕ ಅಭಿವೃದ್ಧಿಪಡಿಸಲು ಇಲಾಖೆ ಅನುಮೋದನೆ ನೀಡಿದೆ. ವೈದ್ಯಕೀಯ ಕಾಲೇಜುಗಳೇ ಸ್ವಯಂಪ್ರೇರಿತವಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ನೀಡಲಾಗುವುದಿಲ್ಲ. ಅತ್ಯಂತ ಮುಖ್ಯವಾಗಿ, ಈ ಎಲ್ಲಾ ಆರೋಗ್ಯ ಕೇಂದ್ರಗಳ ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣವು ಎಂದಿನಂತೆ ಸರ್ಕಾರದ ವೈದ್ಯಾಧಿಕಾರಿಗಳ ಬಳಿಯೇ ಮುಂದುವರಿಯಲಿದ್ದು, ಖಾಸಗಿ ಸಂಸ್ಥೆಗಳು ಕೇವಲ ವೈದ್ಯಕೀಯ ಸೇವೆಗಳನ್ನು ಒದಗಿಸುವ ಪಾತ್ರವನ್ನು ಮಾತ್ರ ನಿರ್ವಹಿಸಲಿವೆ. ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಸರ್ಕಾರ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದೆ.
ಆದರೆ, ಈ ಜನಪರ ನಿರ್ಧಾರದ ವಿರುದ್ಧ ಕೆಲವು ಸಂಘಟನೆಗಳು ರಾಜಕೀಯ ಉದ್ದೇಶಗಳಿಗಾಗಿ “ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ ಮಾಡಲಾಗುತ್ತಿದೆ” ಎಂದು ಸಾರ್ವಜನಿಕರಲ್ಲಿ ಗೊಂದಲ ಮತ್ತು ಭಯ ಹುಟ್ಟಿಸುವ ಸುಳ್ಳು ಪ್ರಚಾರದಲ್ಲಿ ತೊಡಗಿರುವುದು ತೀವ್ರ ವಿಷಾದನೀಯವಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಇಂತಹ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಗ್ರಾಮೀಣ ಜನರ ಆರೋಗ್ಯ ಭದ್ರತೆಯನ್ನು ಹೆಚ್ಚಿಸುವ ಸರ್ಕಾರದ ಈ ಮಹತ್ವದ ಹೆಜ್ಜೆಯನ್ನು ಒಪ್ಪಿಕೊಂಡು, ಜನಹಿತದ ದೃಷ್ಟಿಯಿಂದ ಜಾರಿಯಾಗುತ್ತಿರುವ ಯೋಜನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









