ಮಂಗಳೂರು : ಮಾಜಿ ಪ್ರಧಾನಿ, ರಾಜಕೀಯ ಭೀಷ್ಮ ಹಾಗೂ ಕರ್ನಾಟಕ ರತ್ನ ಹೆಚ್.ಡಿ. ದೇವೇಗೌಡ ಅವರ ಜನ್ಮದಿನವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ವತಿಯಿಂದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನಗರದ ನಿರಾಶ್ರಿತರಿಗೆ ಊಟ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಿತ್ ಸುವರ್ಣ ಅವರು, ದೇಶದ 11ನೇ ಪ್ರಧಾನಿಯಾಗಿ ದೇವೇಗೌಡರು ಕೈಗೊಂಡ ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ ಪರಿಹಾರ, ರೈತರಿಗೆ ರಸಗೊಬ್ಬರ ಸಬ್ಸಿಡಿ ಹಾಗೂ ಕಾವೇರಿ-ಮಹಾದಾಯಿ ನದಿ ನೀರು ಹೋರಾಟಗಳಂತಹ ಐತಿಹಾಸಿಕ ನಿರ್ಧಾರಗಳನ್ನು ಸ್ಮರಿಸಿದರು. ಮಣ್ಣಿನ ಮಗನಾಗಿ ಅವರು ತೋರಿದ ರೈತ ಕಾಳಜಿ ಇಂದಿನ ಯುವಕರಿಗೆ ಮತ್ತು ರಾಜಕಾರಣಿಗಳಿಗೆ ದಾರಿದೀಪವಾಗಿದ್ದು, ಭಗವಂತ ಅವರಿಗೆ ಇನ್ನಷ್ಟು ಆಯಸ್ಸು ಹಾಗೂ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಅವರು ಪಕ್ಷದ ವರಿಷ್ಠರಿಗೆ ಶುಭ ಹಾರೈಸಿ ಮಾತನಾಡಿದರು. ಈ ಮಂಗಲಕರ ಸೇವಾ ಕಾರ್ಯಕ್ರಮದಲ್ಲಿ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ಯುವ ಜೆಡಿಎಸ್ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು ಉಪಸ್ಥಿತರಿದ್ದರು. ಇವರೊಂದಿಗೆ ಪಕ್ಷದ ಪ್ರಮುಖ ಮುಖಂಡರಾದ ವಿನ್ಸೆಂಟ್ ಸುರತ್ಕಲ್, ಪುಷ್ಪರಾಜ್, ಭಾರತಿ, ಕನಕದಾಸ ಕುಳೂರು, ಚೂಡಮಣಿ ಮತ್ತು ಯುವ ಜೆಡಿಎಸ್ ಪದಾಧಿಕಾರಿಗಳಾದ ಸುಶಾಂತ್ ಪೂಜಾರಿ, ವಿಖ್ಯಾತ್, ಪ್ರೀತೇಶ್, ರಕ್ಷಿತ್, ವಿನಿತ್ ಪೂಜಾರಿ, ಆದರ್ಶ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡು ನಿರಾಶ್ರಿತರ ಸೇವೆಯಲ್ಲಿ ತೊಡಗಿಸಿಕೊಂಡರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









