ಮಂಗಳೂರು : ಮಂಗಳೂರಿನ ಕುಂಟಿಕಾನ ಸಮೀಪದ ಲೋಹಿತ್ ನಗರದಲ್ಲಿ ಗುರುವಾರ (ಮೇ 21) ಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದ್ದು, ಭೂಮಿ ಕುಸಿದು ಮಣ್ಣಿನ ರಾಶಿಯಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉರ್ವ ಅಶೋಕನಗರದ ನಿವಾಸಿಯಾದ 65 ವರ್ಷ ಪ್ರಾಯದ ಆಂಟನಿ ಮಸ್ಕರೇನ್ಹಸ್ ಅವರೇ ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕದ್ರಿ ಅಗ್ನಿಶಾಮಕ ಠಾಣೆಯ ರಕ್ಷಣಾ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯನ್ನು ಹೊರತೆಗೆಯಲು ತೀವ್ರ ಕಾರ್ಯಾಚರಣೆ ನಡೆಸಿದರಾದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಈ ದುರಂತವು ಗುರುವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ನಡೆದಿದೆ. ಅಲ್ಲಿನ ಮನೆಯೊಂದರ ಹಿಂಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಆವರಣ ಗೋಡೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಜಾಗದ ಅಳತೆ ಹಾಗೂ ಪರಿಶೀಲನೆ ನಡೆಸುತ್ತಿದ್ದಾಗ ಮೇಲ್ಭಾಗದ ಧರೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿಯೂ ಈ ಭಾಗದಲ್ಲಿ ಮಣ್ಣು ಜರಿತ ಉಂಟಾಗಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡಲು ಮನೆಯ ಮಾಲೀಕರು ನಿರ್ಧರಿಸಿದ್ದರು. ಈ ಕಾಮಗಾರಿಯ ಗುತ್ತಿಗೆಯನ್ನು ಸೆಂಟೋನಿನರ್ ಎಂಬುವವರು ವಹಿಸಿಕೊಂಡಿದ್ದರು ಎನ್ನಲಾಗಿದೆ.
ಅದರಂತೆ ಗುತ್ತಿಗೆದಾರರು ಮೃತ ಆಂಟನಿ ಮಸ್ಕರೇನ್ಹಸ್ ಸೇರಿದಂತೆ ಇತರ ನಾಲ್ವರು ಕಾರ್ಮಿಕರ ಜೊತೆಗೂಡಿ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಆರಂಭಿಸುವ ಮುನ್ನ ಅಳತೆ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಮೇಲ್ಭಾಗದಲ್ಲಿದ್ದ ಮನೆಯ ಆವರಣದ ಮಣ್ಣು ದಿಢೀರನೆ ಕುಸಿದು ಬಿದ್ದ ಪರಿಣಾಮ ಆಂಟನಿ ಅವರು ಸಂಪೂರ್ಣವಾಗಿ ಮಣ್ಣಿನ ಅಡಿಯಲ್ಲಿ ಹೂತುಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ರಕ್ಷಿಸಿ ನಗರದ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲಾಯಿತಾದರೂ, ತೀವ್ರ ಆಘಾತ ಮತ್ತು ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









