ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರದಂದು ನೆರೆದಿದ್ದವರ ಎದೆಝಲ್ಲೆನಿಸುವ ಘಟನೆಯೊಂದು ನಡೆದಿದ್ದು, ಖಾಸಗಿ ಬಸ್ ಸಿಬ್ಬಂದಿಯ ಸಕಾಲಿಕ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗುವಿನ ಪ್ರಾಣ ಉಳಿದಿದೆ. ಕಾವೂರಿನಿಂದ ಕುಂಜತ್ಬೈಲ್ ಮಾರ್ಗವಾಗಿ ಚಲಿಸುತ್ತಿದ್ದ ರೂಟ್ ನಂಬರ್ 13B ರ ‘ಮಾಸ್ಟರ್’ ಸಿಟಿ ಬಸ್ಸಿನ ಚಾಲಕ ದಯಾನಂದ್ ಮತ್ತು ನಿರ್ವಾಹಕ ಸಂದೀಪ್ ಅವರು ಅಪಘಾತಕ್ಕೀಡಾದವರ ನೆರವಿಗೆ ಧಾವಿಸುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾನವೀಯ ಸಂದೇಶ ನೀಡಿದ್ದಾರೆ.
ಮರಕಡ ಜಂಕ್ಷನ್ ಬಳಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಸಿಟಿ ಬಸ್ಸಿನಿಂದ ತಾಯಿ ಮತ್ತು ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಇಬ್ಬರೂ ಪ್ರಜ್ಞೆ ಕಳೆದುಕೊಂಡು ಯಾವುದೇ ಚಲನೆ ಇಲ್ಲದೆ ಬಿದ್ದಿದ್ದನ್ನು ಕಂಡು ಸ್ಥಳೀಯರು ಹಾಗೂ ದಾರಿಹೋಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಯಾರಿಗೂ ಏನು ಮಾಡಬೇಕೆಂದು ತೋಚದ ಆ ಕಠಿಣ ಪರಿಸ್ಥಿತಿಯಲ್ಲಿ, ಅದೇ ಮಾರ್ಗದಲ್ಲಿ ಹಿಂಬದಿಯಿಂದ ಬರುತ್ತಿದ್ದ ಮಾಸ್ಟರ್ ಬಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ತಕ್ಷಣವೇ ತಮ್ಮ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಗಾಯಾಳುಗಳ ಬಳಿಗೆ ಧಾವಿಸಿದರು. ಇಬ್ಬರನ್ನೂ ಉಪಚರಿಸಿ ಪ್ರಾಥಮಿಕ ಧೈರ್ಯ ತುಂಬಿದ ಸಿಬ್ಬಂದಿ, ಆಂಬ್ಯುಲೆನ್ಸ್ಗೆ ಕಾಯುತ್ತಾ ಕೂರದೆ ಸಮಯ ಪ್ರಜ್ಞೆ ಮೆರೆದರು. ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕೆಳಗಿಳಿಯುವಂತೆ ವಿನಂತಿಸಿಕೊಂಡರು. ತದನಂತರ ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಅದೇ ಬಸ್ಸಿನಲ್ಲಿ ಹತ್ತಿಸಿಕೊಂಡು, ನೇರವಾಗಿ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದು ತುರ್ತು ಚಿಕಿತ್ಸೆಗೆ ದಾಖಲಿಸಿದರು.
ಸಕಾಲದಲ್ಲಿ ಆಸ್ಪತ್ರೆ ತಲುಪಿಸುವ ಮೂಲಕ ಇಬ್ಬರ ಜೀವ ಉಳಿಸಿದ ಈ ಬಸ್ ಚಾಲಕ ಮತ್ತು ನಿರ್ವಾಹಕರ ಅಪೂರ್ವ ಮಾನವೀಯ ಕಾರ್ಯದ ವಿಡಿಯೋ ಮತ್ತು ಮಾಹಿತಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಹಾಗೂ ಮಂಗಳೂರಿನ ಸಾರ್ವಜನಿಕರು ಈ ಇಬ್ಬರು ರಿಯಲ್ ಹೀರೊಗಳ ಸಮಯಪ್ರಜ್ಞೆ ಮತ್ತು ಕರುಣಾಮಯಿ ಹೃದಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









