ಮಂಗಳೂರು : ನಗರದ ಸುಲ್ತಾನ್ ಬತ್ತೇರಿ, ಬೆಂಗ್ರೆ ಹಾಗೂ ಬೊಕ್ಕಪಟ್ಣ ಪರಿಸರದ ಫಲ್ಗುಣಿ ನದ ತೀರದಲ್ಲಿ ಶನಿವಾರ ನೂರಾರು ಮೀನುಗಳು ಮೃತಪಟ್ಟ ಸ್ಥಿತಿಯಲ್ಲಿ ಹಾಗೂ ಅರೆ ಪ್ರಜ್ಞಾವಸ್ಥೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮುಂಜಾನೆ ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಈ ಭೀಕರ ದೃಶ್ಯವನ್ನು ಗಮನಿಸಿದ್ದು, ನದಿಗೆ ರಾಸಾಯನಿಕಯುಕ್ತ ಕಲುಷಿತ ನೀರು ಸೇರಿರುವುದೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗ್ರೆ ಮತ್ತು ಸುಲ್ತಾನ್ ಬತ್ತೇರಿ ನಡುವೆ ನಡೆಯುತ್ತಿರುವ ಸೇತುವೆ ಕಾಮಗಾರಿಗಾಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತಡೆಗೋಡೆಯೇ ಈ ಸಮಸ್ಯೆಗೆ ಮೂಲ ಎನ್ನಲಾಗಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಈ ತಡೆಗೋಡೆಯಿಂದಾಗಿ ಮರವೂರು ಅಣೆಕಟ್ಟಿನವರೆಗೂ ನದಿಯ ನೀರು ಹರಿಯದೆ ಸ್ಥಗಿತಗೊಂಡಿತ್ತು. ಈ ಸುದೀರ್ಘ ಬೇಸಿಗೆಯ ಅವಧಿಯಲ್ಲಿ ಸುತ್ತಮುತ್ತಲಿನ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ, ಮಳೆನೀರಿನ ಚರಂಡಿ ನಾಲೆಯ ಕೊಳಕು ಹಾಗೂ ಮಹಾನಗರ ಪಾಲಿಕೆಯ ಸಂಸ್ಕರಿಸದ ಒಳಚರಂಡಿ ನೀರು ಒಂದೇ ಕಡೆ ಸಂಗ್ರಹವಾಗಿ ಇಡೀ ನದಿ ನೀರು ಕಪ್ಪಾಗಿ ಮಾರ್ಪಟ್ಟಿತ್ತು.
ಪ್ರಸ್ತುತ ಮುಂಗಾರು ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸೇತುವೆಯ ತಡೆಗೋಡೆಯನ್ನು ತೆರವುಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಸಾಮಾನ್ಯವಾಗಿ ಹೊಸ ನೀರು ಬಂದಾಗ ಮೀನುಗಳು ಎದುರು ಈಜುತ್ತವೆ, ಆದರೆ ಇಲ್ಲಿ ನಿಂತಿದ್ದ ಭಾರಿ ಪ್ರಮಾಣದ ರಾಸಾಯನಿಕಯುಕ್ತ ಕಲುಷಿತ ನೀರು ಒಮ್ಮೆಲೇ ಕೆಳಮುಖವಾಗಿ ಹರಿಯಲಾರಂಭಿಸಿದ್ದರಿಂದ ಮೀನುಗಳಿಗೆ ಆಮ್ಲಜನಕ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಮೀನುಗಾರರು ವಿವರಿಸಿದ್ದಾರೆ. ಈ ಹಿಂದೆ ಕುಳೂರು, ಬೈಕಂಪಾಡಿ ಭಾಗಗಳಲ್ಲಿ ಇಂತಹ ಘಟನೆಗಳು ವರದಿಯಾಗಿದ್ದರೂ, ಬೆಂಗ್ರೆ ಮತ್ತು ಬತ್ತೇರಿ ವಲಯದಲ್ಲಿ ಈ ರೀತಿಯ ಮೀನುಗಳ ಸಾವು ಇದೇ ಮೊದಲ ಬಾರಿಗೆ ಸಂಭವಿಸಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಿಂತ ನೀರು ಕದಲಿದ್ದೇ ಈ ದುಸ್ಥಿತಿಗೆ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನದಿಗೆ ಸಂಸ್ಕರಿಸದ ತ್ಯಾಜ್ಯ ಹಾಗೂ ಒಳಚರಂಡಿ ನೀರನ್ನು ಹರಿಸಲು ಬೇಜವಾಬ್ದಾರಿಯಿಂದ ಅವಕಾಶ ಮಾಡಿಕೊಟ್ಟಿದ್ದ ಅಧಿಕಾರಿಗಳ ವಿರುದ್ಧ ಈಗಾಗಲೇ ಇಲಾಖಾ ಮಟ್ಟದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









