ಬೆಂಗಳೂರು : ಇಂದು ಕರ್ನಾಟಕ ವಿಧಾನಪರಿಷತ್ತಿನ 7 ಸ್ಥಾನಗಳಿಗಾಗಿ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಕಣದಲ್ಲಿ ಒಟ್ಟು 8 ಜನ ಅಭ್ಯರ್ಥಿಗಳಿದ್ದು, ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ನ ನಾಲ್ವರು ಅಭ್ಯರ್ಥಿಗಳು ಸುಲಭವಾಗಿ ಗೆಲುವಿನ ದಡ ಸೇರುವ ನಿರೀಕ್ಷೆಯಿದೆ. ಆದರೆ, ಐದನೇ ಸ್ಥಾನವನ್ನು ಕೈವಶ ಮಾಡಿಕೊಳ್ಳಲು ತೆರೆಮರೆಯಲ್ಲಿ ಭರ್ಜರಿ ರಾಜಕೀಯ ತಂತ್ರಗಾರಿಕೆಗಳು ನಡೆಯುತ್ತಿವೆ.
ಈ ನಿರ್ಣಾಯಕ ಹಂತದಲ್ಲೇ ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕ ಜಿ.ಟಿ. ದೇವೇಗೌಡ ಅವರು ಹೈಕಮಾಂಡ್ಗೆ ದೊಡ್ಡ ಆಘಾತ ನೀಡಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಜೆಡಿಎಸ್ನ ಬಹುತೇಕ ಶಾಸಕರು ಒಗ್ಗಟ್ಟಿನ ಪ್ರದರ್ಶನಕ್ಕಾಗಿ ರೆಸಾರ್ಟ್ಗೆ ತೆರಳಿದ್ದರೆ, ಪಕ್ಷದ ನಾಯಕರ ನಡವಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಜಿ.ಟಿ.ಡಿ ಮಾತ್ರ ರೆಸಾರ್ಟ್ ರಾಜಕಾರಣದಿಂದ ಸಂಪೂರ್ಣ ದೂರವುಳಿದಿದ್ದಾರೆ.
ಚುನಾವಣಾ ನಿಯಮಾವಳಿಗಳ ಪ್ರಕಾರ ಏಜೆಂಟರುಗಳಿಗೆ ಖಾಲಿ ಮತಪೆಟ್ಟಿಗೆಯನ್ನು ಪ್ರದರ್ಶಿಸಿ ಅಧಿಕೃತ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಜಿ.ಟಿ. ದೇವೇಗೌಡರು ಯಾರ ನೆರವೂ ಇಲ್ಲದೆ ಒಂಟಿಯಾಗಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಇವರ ಬೆನ್ನಲ್ಲೇ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಎಸ್.ಆರ್. ವಿಶ್ವನಾಥ್ ಸೇರಿದಂತೆ ಪ್ರಮುಖ ನಾಯಕರು ಸರತಿಯಲ್ಲಿ ಬಂದು ಮತದಾನ ಮಾಡಿದರು.
ಕಳೆದ ಕೆಲವು ಸಮಯದಿಂದ ಜೆಡಿಎಸ್ ವರಿಷ್ಠರ ನಿರ್ಧಾರಗಳಿಂದ ತೀವ್ರ ಅಸಮಾಧಾನಗೊಂಡಿದ್ದ ಜಿ.ಟಿ.ಡಿ, ಪಕ್ಷದ ಯಾವುದೇ ಅಧಿಕೃತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಇದೀಗ ಅವರು ರೆಸಾರ್ಟ್ಗೆ ಹೋಗದೆ ನೇರವಾಗಿ ಬಂದು ವೋಟ್ ಮಾಡಿರುವುದು, ಅವರು ಅಡ್ಡಮತದಾನ (ಕ್ರಾಸ್ ವೋಟಿಂಗ್) ಮಾಡಿರಬಹುದು ಎಂಬ ಅನುಮಾನಗಳಿಗೆ ದಟ್ಟವಾದ ರೆಕ್ಕೆಪುಕ್ಕ ತಂದುಕೊಟ್ಟಿದೆ.
ರಾಜಕೀಯ ವಲಯದ ನಂಬಿಕಸ್ಥ ಮೂಲಗಳ ಪ್ರಕಾರ, ಜಿ.ಟಿ. ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ನಾಯಕತ್ವದ ವಿರುದ್ಧ ಬಂಡೆದ್ದಿರುವ ಆರೋಪದ ಮೇಲೆ ಅವರನ್ನು ಜೆಡಿಎಸ್ನಿಂದ ಉಚ್ಚಾಟಿಸಲು ವರಿಷ್ಠರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಚರ್ಚೆಗಳು ಈಗ ಜೋರಾಗಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









