ಮಂಗಳೂರು : ಪಡೀಲ್ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕಳೆದ 12 ವರ್ಷಗಳಿಂದ ಜೀವನೋಪಾಯಕ್ಕಾಗಿ ಹೂವಿನ ವ್ಯಾಪಾರ ಮಾಡುತ್ತಿದ್ದ ಚಂದ್ರಹಾಸ್ ಮತ್ತು ಸುನೀತಾ ಎಂಬ ಇಬ್ಬರು ಅಂಗವಿಕಲ ವ್ಯಾಪಾರಿಗಳ ಅಂಗಡಿಗಳನ್ನು ಮಹಾನಗರ ಪಾಲಿಕೆಯ ವಲಯ 2ರ ಆಯುಕ್ತೆ ರೇಖಾ ಶೆಟ್ಟಿ ಅವರ ನೇತೃತ್ವದಲ್ಲಿ ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದೆ. ಯಾವುದೇ ಮುನ್ಸೂಚನೆ ಅಥವಾ ಪರ್ಯಾಯ ಜಾಗದ ವ್ಯವಸ್ಥೆ ಮಾಡದೆ ನಿಯಮಬಾಹಿರವಾಗಿ ನಡೆಸಿರುವ ಈ ಕಾರ್ಯಾಚರಣೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಶೇ. 75ರಷ್ಟು ದೈಹಿಕ ಅಂಗವಿಕಲತೆ ಹೊಂದಿರುವ ಸಂತ್ರಸ್ತ ವ್ಯಾಪಾರಿ ಚಂದ್ರಹಾಸ್ ಅವರು ಪಾಲಿಕೆಯ ದೌರ್ಜನ್ಯದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಪಾಲಿಕೆಯಿಂದ ಅಧಿಕೃತ ಗುರುತಿನ ಚೀಟಿ ಮತ್ತು ವ್ಯಾಪಾರ ಪ್ರಮಾಣ ಪತ್ರವನ್ನು ಪಡೆದುಕೊಂಡೇ ಇಷ್ಟು ವರ್ಷಗಳಿಂದ ಪ್ರಾಮಾಣಿಕವಾಗಿ ಕುಟುಂಬವನ್ನು ಸಲಹುತ್ತಿದ್ದ ತಮಗೆ, ಯಾವುದೇ ಪೂರ್ವ ನೋಟಿಸ್ ನೀಡದೆ ದಿಢೀರನೆ ದಬ್ಬಾಳಿಕೆ ನಡೆಸಿ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಕ್ಯಾನ್ಸರ್ನಿಂದ ಪತಿಯನ್ನು ಕಳೆದುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಮತ್ತೊಬ್ಬ ಅಂಗವಿಕಲ ಮಹಿಳಾ ವ್ಯಾಪಾರಿ ಸುನೀತಾ ಅವರು ಅಧಿಕಾರಿಗಳ ಕ್ರೌರ್ಯಕ್ಕೆ ತುತ್ತಾಗಿ ಕಣ್ಣೀರು ಸುರಿಸಿದ್ದಾರೆ. ತಳ್ಳುಗಾಡಿಯಲ್ಲೇ ವ್ಯಾಪಾರ ಮಾಡಿಕೊಂಡು ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದ್ದ ತಮಗೆ ಪಾಲಿಕೆಯ ಅಧಿಕಾರಿಗಳು ಕಿಂಚಿತ್ತೂ ಕರುಣೆ ತೋರದೆ ಜೀವನದ ಏಕೈಕ ದಾರಿಯಾಗಿದ್ದ ಗಾಡಿಯನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿ ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಗೌರವಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ನೇತೃತ್ವದ ನಿಯೋಗವು ಭೇಟಿ ನೀಡಿ, ಸಂತ್ರಸ್ತ ವ್ಯಾಪಾರಿಗಳಿಗೆ ಧೈರ್ಯ ತುಂಬಿದೆ. ಸಂತ್ರಸ್ತರು ತಮ್ಮ ಹಕ್ಕಿಗಾಗಿ ನಡೆಸುವ ಕಾನೂನಾತ್ಮಕ ಹೋರಾಟಕ್ಕೆ ಸಂಘಟನೆಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಪಾಲಿಕೆಯ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ ಬಿ.ಕೆ. ಇಮ್ತಿಯಾಜ್, ಅಧಿಕೃತ ಐಡಿ ಕಾರ್ಡ್ ಹೊಂದಿರುವವರಿಗೆ ವ್ಯಾಪಾರಕ್ಕೆ ಮುಕ್ತ ಅವಕಾಶವಿದೆ ಎಂದು ಹೇಳಿಕೆ ನೀಡುವ ಅಧಿಕಾರಿಗಳೇ ಇಂದು ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಿದ್ದ ಅಂಗವಿಕಲರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದು, ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್. ಹಾಗೂ ವಿಜಯ್ ಜೈನ್ ಹಾಜರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









