ಉಡುಪಿ : ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ (ಕೋಟ್ಪಾ-2003) ಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ, ಉಡುಪಿ ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದ ವಿಶೇಷ ಕಾರ್ಯಪಡೆಯೊಂದು ಕಾಪು ತಾಲೂಕಿನ ವಿವಿಧೆಡೆ ಇತ್ತೀಚೆಗೆ ಅನಿರೀಕ್ಷಿತ ತಪಾಸಣೆ ಕೈಗೊಂಡಿದೆ.
ಕಾಪು ತಾಲೂಕಿನ ಪಡುಬಿದ್ರಿ ಪೇಟೆ ಹಾಗೂ ಬಸ್ ನಿಲ್ದಾಣದ ಆಸುಪಾಸಿನಲ್ಲಿರುವ ಬಾರ್, ರೆಸ್ಟೋರೆಂಟ್, ಹೋಟೆಲ್ ಹಾಗೂ ಬೀಡಾ-ಸಿಗರೇಟ್ ಅಂಗಡಿಗಳ ಮೇಲೆ ಈ ಜಂಟಿ ತಂಡ ದಿಢೀರ್ ಎರಗಿದೆ. ನಿಯಮ ಮೀರಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪತ್ತೆಹಚ್ಚಿದ ಅಧಿಕಾರಿಗಳು, ಒಟ್ಟು 44 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅವರಿಂದ 17,000 ರೂ. ದಂಡದ ಮೊತ್ತವನ್ನು ಸಂಗ್ರಹಿಸಿದ್ದಾರೆ.
ಈ ಜಂಟಿ ಕಾರ್ಯಾಚರಣೆಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಅವರೊಂದಿಗೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ ಜಾದರ್, ಜಗದೀಶ್ ರಾವ್, ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸಾಥ್ ನೀಡಿದ್ದರು. ಇವರಲ್ಲದೆ, ತಾಲೂಕು ದೈಹಿಕ ಪರೀಕ್ಷಣಾಧಿಕಾರಿ ರವೀಂದ್ರ ನಾಯ್ಕ್, ಪಡುಬಿದ್ರಿ ಠಾಣೆಯ ಪೊಲೀಸ್ ಸಿಬ್ಬಂದಿ ಶ್ರೀಧರ್ ಆರ್., ಕಾರ್ಮಿಕ ನಿರೀಕ್ಷಕ ಎನ್.ಪಿ.ಎಲ್. ಸಂಜಯ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ ಮಂಜುಳಾ ಮತ್ತು ಸಮಾಜ ಸೇವಕ ಮಹೇಶ್ ಡಿ. ಭಂಡಾರಿ ಈ ತಪಾಸಣಾ ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









