ಮಂಗಳೂರು : ಆರ್ಎಸ್ಎಸ್ ನೋಂದಣಿ ಬಗ್ಗೆ ಮಾತನಾಡುವ ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಶಕ್ತಿಯಿದ್ದರೆ ವಿಧಾನಸಭೆಯ ಒಳಗಡೆಯೇ ಆರ್ಎಸ್ಎಸ್ ಪ್ರಾರ್ಥನೆ ಹಾಡಿರುವ ಈಗಿನ ಸಿಎಂ ಬಗ್ಗೆ ಪ್ರಶ್ನೆ ಮಾಡಲಿ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಸವಾಲೆಸೆದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಈಗಿರುವ ಅನೇಕ ಮಂದಿ ಆರ್ಎಸ್ಎಸ್ ಶಿಕ್ಷಣ ಪಡೆದವರಾಗಿದ್ದಾರೆ. ಅವರನ್ನೂ ಪ್ರಶ್ನಿಸಲಿ. ಈ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಲಿ. ಅದು ಬಿಟ್ಟು ಆರ್ಎಸ್ಎಸ್ ನೋಂದಣಿಯಾಗಿದ್ದಾ, ನೋಂದಣಿ ಮಾಡಿಸುತ್ತೇನೆ ಎನ್ನುವುದು ಪ್ರಚಾರ ಪ್ರಿಯತೆಯಾಗಿದೆ. ಅವರಿಗೆ ರಾಜ್ಯದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅಥವಾ ಅವರಿಗೆ ಗೃಹ ಇಲಾಖೆಯ ಬಗ್ಗೆ ಒಲವಿಲ್ಲ. ಬೇರಾವುದೋ ಆರ್ಥಿಕವಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವ ಇಲಾಖೆಯ ಬಗ್ಗೆ ಒಲವಿದೆ. ಅದಕ್ಕಾಗಿ ಈ ಚರ್ಚೆ ಎಬ್ಬಿಸಿರಬಹುದು ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಯವರು ತಮ್ಮ ಜವಾಬ್ದಾರಿಯನ್ನು ಮರೆತು ಪ್ರಚಾರದ ಹಿಂದೆ ಬಿದ್ದಿದ್ದಾರೆ. ಅವರಿಗೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಗಟ್ಟಿಸಿಕೊಳ್ಳುವ ಹುಚ್ಚು ಹೆಚ್ಚಿದೆ. ಗೃಹ ಸಚಿವರಾಗಿ ಅವರ ಜವಾಬ್ದಾರಿಯನ್ನು ಗಮನಿಸುವುದು ಬಿಟ್ಟು ಆರ್ಎಸ್ಎಸ್ ನೋಂದಣಿ ವಿಚಾರವನ್ನು ಎತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಅವರು ಕಾರ್ಯಪ್ರಿಯರಲ್ಲ ಪ್ರಚಾರ ಪ್ರಿಯ ಎಂದು ತಿಳಿದು ಬರುತ್ತದೆ ಎಂದು ಲೇವಡಿ ಮಾಡಿದರು.
ಗೃಹ ಇಲಾಖೆಗೆ ಸಂಬಂಧಿಸಿದ ಹತ್ತಾರು ವಿಚಾರಗಳಿವೆ. ಆ ವಿಷಯಗಳ ಬಗ್ಗೆ ಅವರು ಗಮನ ಹರಿಸಿದ್ದಾರೆಯೇ? ರಾಜ್ಯದಲ್ಲಿ ಮಾದಕದ್ರವ್ಯಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ಬಗ್ಗೆ ಅವರೇನು ಮಾಡಿದ್ದಾರೆ?, ಪ್ರಿಯಾಂಕ್ ಖರ್ಗೆಯವರು ಗೃಹ ಸಚಿವರಾದ ಬಳಿಕ ಡ್ರಗ್ಸ್ ಮಾಫಿಯಾದ ಬಗ್ಗೆ ಚರ್ಚೆಯೇ ನಡೆದಿಲ್ಲ. ಓರ್ವ ಗೃಹ ಸಚಿವರಾಗಿ ರಾಜ್ಯದ ಆಂತರಿಕ ಸುರಕ್ಷತೆಯ ಬಗ್ಗೆ ವಿಷಯವನ್ನು ಎತ್ತದೆ ಅವರು ವಿಷಯಾಂತರ ಮಾಡುತ್ತಿದ್ದಾರೆ.
ಆರ್ಎಸ್ಎಸ್ ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿ ಕೆಲಸ ಮಾಡುತ್ತ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಕಾಯಕವನ್ನು ಮಾಡುತ್ತಿದೆ. ಪ್ರಿಯಾಂಕ್ ಖರ್ಗೆಯವರು ಹುಟ್ಟುವ ಮೊದಲೇ ಆರ್ಎಸ್ಎಸ್ ಇದೆ. ಬ್ರಿಟಿಷರ ಕಾಲದಿಂದಲೂ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾರ್ಯವನ್ನು ಮಾಡುತ್ತಾ ಬಂದಿದೆ. ಆರ್ಎಸ್ಎಸ್ಗೆ ನೆಹರೂ, ಲಾಲ್ಬಹದ್ದೂರ್ ಅವರೇ ಸಹಮತವನ್ನು ತೋರಿದ್ದರು. ಎಲ್ಲರೂ ಆರ್ಎಸ್ಎಸ್ ಅನ್ನು ಹೊಗಳಿದ್ದರು ಎಂದರು.
ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಬಾಲ್ಯದಲ್ಲಿ ಪಟ್ಟ ಕಷ್ಟಗಳ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದರು. ಅವರ ಮನೆಸುಟ್ಟು ಹೋಗಿ, ಅವರ ಅಜ್ಜಿ ಸುಟ್ಟು ಕರಕಲಾಗಿರುವ ಕಥೆಗಳನ್ನು ಹೇಳಿದ್ದರು. ಅದೆಲ್ಲಾ ಯಾರಿಂದ ಆಗಿರಬಹುದು ಅನ್ನುವುದಕ್ಕೆ ಮೊದಲು ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು ಉತ್ತರ ಹುಡುಕಲಿ. ಆಮೇಲೆ ಆರ್ಎಸ್ಎಸ್ ನೋಂದಣಿ ಬಗ್ಗೆ ಮಾತನಾಡಲಿ ಎಂದರು.
ಸಂಘ ನೋಂದಣಿಯಾಗಿದೆಯೇ, ನೋಂದಣಿ ಆಗಿಲ್ಲವೋ ಅದು ಬೇರೆ ಪ್ರಶ್ನೆ. ಆದರೆ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಿದೆ. ರಾಷ್ಟ್ರಭಕ್ತಿ ಉದ್ದೀಪನ ಮಾಡಿದೆ. ಪ್ರತಿಯೊಬ್ಬರಿಗೂ ರಾಷ್ಟ್ರಧರ್ಮದ ಬಗ್ಗೆ ಹೇಳಿದೆ. ವ್ಯಕ್ತಿ ನಿರ್ಮಾಣದ ಕಾರ್ಯ ಮಾಡಿದೆ. ಸಂಘದಲ್ಲಿ ಬೆಳೆದು ಬಂದ ವಾಜಪೇಯಿ, ಮೋದಿಯವರು ದೇಶದ ಪ್ರಧಾನಮಂತ್ರಿಗಳಾಗಿದ್ದಾರೆ. ಅಡ್ವಾಣಿಯಂಥವರಿಂದ ದೇಶದ ಹಿತದ ಕೆಲಸ ಆಗಿದೆ. ಆರ್ಎಸ್ಎಸ್ನಿಂದ ಶಿಕ್ಷಣ ಪಡೆದವರು ಕಳಂಕ ರಹಿತ ಪ್ರಧಾನಿಗಳಾಗಿದ್ದಾರೆ. ಆದ್ದರಿಂದ ಪ್ರಿಯಾಂಕ್ ಖರ್ಗೆಯವರಿಗೆ ಆರ್ಎಸ್ಎಸ್ ನೋಂದಣಿ ವಿಚಾರ ಬಿಟ್ಟು ಗೃಹ ಇಲಾಖೆಯ ಕಡೆಗೆ ಗಮನಹರಿಸಲು ನಳಿನ್ ಕುಮಾರ್ ಕಟೀಲು ತಾಕೀತು ಮಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









