ಮಂಗಳೂರು: ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಸನ್ನಿಧಿ ಅತಿಥಿಗೃಹದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ ನೀಗಿ ರೈತರ ಬದುಕು ಹಸನಾಗಲಿ ಹಾಗೂ ಕರ್ನಾಟಕದಲ್ಲಿ ಶೀಘ್ರದಲ್ಲೇ ಹಿಂದೂಗಳ ರಕ್ಷಣೆ ಮಾಡುವ ಸತ್ಪ್ರಜಾ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯ ಅಡ್ಡಮತದಾನದ ವಿದ್ಯಮಾನಗಳು ತಮಗೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರ ತಂದಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲೇ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಿದ್ದಾಗಿ ಒಪ್ಪಿಕೊಂಡರು. ಆದರೆ, ಪಕ್ಷದ ವರಿಷ್ಠರ ಮತ್ತು ಹಿರಿಯ ನಾಯಕರ ಸಲಹೆಗೆ ಗೌರವ ನೀಡಿ ಸದ್ಯಕ್ಕೆ ಆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆಯ ಅಡ್ಡಮತದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ತಮ್ಮ ನಡುವಿನ ಆತ್ಮೀಯತೆಯೇ ಕಾರಣ ಎಂಬ ಅಪಪ್ರಚಾರದ ವಿರುದ್ಧ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಕೀಳು ಮಟ್ಟದ ರಾಜಕೀಯವನ್ನು ತಾವು ಎಂದಿಗೂ ಮಾಡುವುದಿಲ್ಲ ಎಂದ ಅವರು, ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರೀತಿಯ ವ್ಯವಹಾರಿಕ ಅಥವಾ ವೈಯಕ್ತಿಕ ಬಾಂಧವ್ಯ ತಮಗಿಲ್ಲ ಎಂದು ಪವಿತ್ರ ಕ್ಷೇತ್ರದಲ್ಲಿ ನಿಂತು ಆಣೆ ಮಾಡಿದರು. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದಾಗ ಅವರಿಗೆ ಕೇವಲ ಸಾಂವಿಧಾನಿಕ ಗೌರವವನ್ನಷ್ಟೇ ನೀಡಿದ್ದೇನೆ. ನಮ್ಮದೇ ಪಕ್ಷದ ಕೆಲವರು ಈ ವದಂತಿಗಳಿಗೆ ಗ್ರಾಸ ಒದಗಿಸಿದ್ದಾರೆ ಎಂಬ ಅರಿವು ತಮಗಿದ್ದು, ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಗೌಪ್ಯ ಮತದಾನದ ಸಂಪೂರ್ಣ ಸತ್ಯಾಸತ್ಯತೆ ಮತ್ತು ವರದಿ ವರಿಷ್ಠರ ಮೂಲಕ ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಈಶ್ವರಪ್ಪ ಅವರು ಸದ್ಯ ಶಾಸಕರೂ ಅಲ್ಲ, ಪಕ್ಷದಲ್ಲೂ ಇಲ್ಲದ ಕಾರಣ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ಆದರೆ ಹಿಂದೆ 17 ಜನ ಶಾಸಕರು ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ನಂಬಿಕೆಯಿಟ್ಟು ಬಂದಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು ಮತ್ತು ಅದೇ ಸರ್ಕಾರದಲ್ಲಿ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ಅನುಭವಿಸಿದ್ದರು ಎಂಬುದನ್ನು ನೆನಪಿಸಿದರು. ಜೊತೆಗೆ, ಅವರ ಅವಧಿಯಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯನ್ನು ಪ್ರಸ್ತಾಪಿಸಿದರು. ಇನ್ನು ಶಾಸಕ ಎಸ್.ಟಿ. ಸೋಮಶೇಖರ್ ಅವರು ತಮ್ಮ ಜೊತೆಗಿರುವ ಮೂವರು ಬಿಜೆಪಿ ಶಾಸಕರನ್ನು ರಕ್ಷಿಸಲು ವಿಲಕ್ಷಣವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಾಜಿ ಸಿಎಂ ಸದಾನಂದಗೌಡರು ತಮಗೆ ಕರೆ ಮಾಡಿದ್ದ ವಿಷಯವನ್ನು ಬೆಂಗಳೂರಿಗೆ ಮರಳಿದ ಬಳಿಕ ಹಿರಿಯರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ತಮ್ಮನ್ನು ಹಿರಿಯರು ಮುಖ್ಯಮಂತ್ರಿ ಮಾಡಲು ಅಧ್ಯಕ್ಷರನ್ನಾಗಿ ಮಾಡಿಲ್ಲ, ಬದಲಿಗೆ ಪಕ್ಷ ಸಂಘಟನೆಗಾಗಿ ಈ ಜವಾಬ್ದಾರಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, ಹಿರಿಯ ನಾಯಕರು ಮೊದಲು ಆ ಹಳೆಯ ಮನಸ್ಥಿತಿಯಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು. ಸುನೀಲ್ ಕುಮಾರ್ ಅವರು ಸಮಿತಿ ಸಭೆಯ ಕಾರಣದಿಂದ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ ಎಂದ ಅವರು, ಬೆಂಗಳೂರಿನ ಬಿಡದಿ ಹೋರಾಟದ ಕುರಿತು ಆರ್. ಅಶೋಕ್ ಅವರೊಂದಿಗೆ ದೆಹಲಿಯಲ್ಲಿ ಚರ್ಚಿಸಲಾಗಿದ್ದು, ನಾಳೆ ಅದರ ಅಧಿಕೃತ ಘೋಷಣೆ ಮಾಡಲಾಗುವುದು ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಿಎಜಿ ವರದಿಯಲ್ಲೂ ಉಲ್ಲೇಖವಾಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಪುಡಾರಿಗಳನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಹಣ ಲೂಟಿ ಹೊಡೆಯಲಾಗುತ್ತಿದೆ. ತಕ್ಷಣವೇ ಅಂತಹ ರಾಜಕೀಯ ನೇಮಕಾತಿಗಳನ್ನು ರದ್ದುಗೊಳಿಸಿ, ಅಧಿಕಾರಿಗಳ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










