ಉಡುಪಿ : ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಮೂವರು ಸಕ್ರಿಯ ರೌಡಿ ಶೀಟರ್ಗಳನ್ನು ಜಿಲ್ಲೆಯಿಂದ ಹೊರಹಾಕುವ ಮಹತ್ವದ ಆದೇಶವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಯಾಗಿರುವ ಹರಿರಾಂ ಶಂಕರ್ ಅವರು ಹೊರಡಿಸಿದ್ದಾರೆ. ಸಮಾಜ ವಿರೋಧಿ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಈ ಆರೋಪಿಗಳ ವಿರುದ್ಧ ಕಾನೂನಿನ ಅಸ್ತ್ರ ಪ್ರಯೋಗಿಸಲಾಗಿದ್ದು, ಜೂನ್ 24 ರಂದು ಅಧಿಕೃತವಾಗಿ ಈ ಗಡಿಪಾರು ಆದೇಶವನ್ನು ಜಾರಿಗೊಳಿಸಲಾಗಿದೆ.
ಈ ಕಠಿಣ ಕ್ರಮಕ್ಕೆ ಒಳಗಾದವರಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ದಾನೀಶ್ ಮದನಿ (23) ಮತ್ತು ಕಂಡ್ಲೂರು ನಿವಾಸಿ ಕರಾಣಿ ಮುಸೀನ್ (44) ಸೇರಿದ್ದಾರೆ. ಇವರೊಂದಿಗೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೂರು ಗ್ರಾಮದ ಜನತಾ ಕಾಲೋನಿಯ ನಿವಾಸಿ ಇಲಿಯಾಸ್ (36) ಎಂಬಾತನನ್ನು ಸಹ ಗಡಿಪಾರು ಮಾಡಲಾಗಿದೆ. ಈ ಮೂವರೂ ಆರೋಪಿಗಳು ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಯ ಮೇಲೆಯೇ ಕಲ್ಲೆಸೆತ, ಕಳ್ಳತನ, ಜಾನುವಾರು ಅಪಹರಣ ಹಾಗೂ ಹತ್ಯೆ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ಒಟ್ಟು 30 ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ನಿರಂತರ ಭೀತಿ ಹುಟ್ಟಿಸುತ್ತಿದ್ದರು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಪಿಗಳ ಪೈಕಿ ದಾನೀಶ್ ಮದನಿ ವಿರುದ್ಧ 8 ಪ್ರಕರಣಗಳಿದ್ದು, ಈತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಠಾಣಾ ವ್ಯಾಪ್ತಿಗೆ ಕಳುಹಿಸಲಾಗಿದೆ. ಹಾಗೆಯೇ 7 ಪ್ರಕರಣಗಳನ್ನು ಎದುರಿಸುತ್ತಿರುವ ಕರಾಣಿ ಮುಸೀನ್ನನ್ನು ಬೀದರ್ ಜಿಲ್ಲೆಯ ಗಾಂಧಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಬರೋಬ್ಬರಿ 15 ಕರಡು ಪ್ರಕರಣಗಳಲ್ಲಿ ಭಾಗಿಯಾಗಿರುವ ಇಲಿಯಾಸ್ನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಅಲ್ಲಿನ ಪೊಲೀಸರ ಕಣ್ಗಾವಲಿನಲ್ಲಿ ಇಡಲು ಆದೇಶಿಸಲಾಗಿದೆ.
ಜಿಲ್ಲೆಯಲ್ಲಿ ರೌಡಿಸಂ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಕಳೆದ ಒಂದು ವರ್ಷದಿಂದ ಕಠಿಣ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮೂವರನ್ನು ಬಂಧಿಸಲಾಗಿದೆ. ಅಲ್ಲದೆ ನಾಲ್ವರ ವಿರುದ್ಧ ಗೂಂಡಾ ಕಾಯ್ದೆ ಬಳಸಿ ಜೈಲಿಗಟ್ಟಲಾಗಿದ್ದು, ಈ ಮೂವರೂ ರೌಡಿ ಶೀಟರ್ಗಳು ಸೇರಿ ಒಟ್ಟು 14 ಮಂದಿ ಸಮಾಜ ಕಂಟಕರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಉಡುಪಿ ಪೊಲೀಸರು ಅಪರಾಧ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಕಠಿಣ ಹೆಜ್ಜೆ ಇರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










