ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ದೋಚಿ, ಬಳಿಕ ಅಶ್ಲೀಲ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಹಾಗೂ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀನತ್ ಇಬ್ರಾಹಿಂ ಎಂಬ ಮಹಿಳೆಯನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೃತ್ತಿ ನಿಮಿತ್ತ ಆರೋಪಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಉದ್ಯಮಿ, ಆಕೆಯೊಂದಿಗೆ ಜಂಟಿಯಾಗಿ ರಿಯಲ್ ಎಸ್ಟೇಟ್ ವ್ಯವಹಾರದ ಕಚೇರಿಯನ್ನು ಆರಂಭಿಸಿದ್ದರು. ಈ ವೇಳೆ ಜಮೀನು ಖರೀದಿ ಮಾಡುವ ಉದ್ದೇಶದಿಂದ ನಂಬಿಕೆ ಮೇರೆಗೆ ಹೂಡಿಕೆ ಮಾಡಿದ್ದ 70 ಲಕ್ಷ ರೂಪಾಯಿ ಹಣವನ್ನು ಆರೋಪಿಯು ದುರ್ಬಳಕೆ ಮಾಡಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.
ವ್ಯವಹಾರದಲ್ಲಿ ನಷ್ಟ ಉಂಟಾಗಿ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಉದ್ಯಮಿಗೆ ಕೆಲವು ರಹಸ್ಯ ದಾಖಲೆಗಳು ಹಾಗೂ ಪೆನ್ ಡ್ರೈವ್ ಲಭ್ಯವಾಗಿದ್ದು, ಅದರಲ್ಲಿ ಹಲವು ಗಣ್ಯ ವ್ಯಕ್ತಿಗಳ ಅಶ್ಲೀಲ ಚಿತ್ರಗಳು ಮತ್ತು ಖಾಸಗಿ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಇತ್ತ ತಾನು ಹೂಡಿಕೆ ಮಾಡಿದ್ದ 70 ಲಕ್ಷ ರೂಪಾಯಿಯನ್ನು ವಾಪಸ್ ಕೇಳಲು ಹೋದಾಗ ಉದ್ಯಮಿಗೆ ಆರೋಪಿ ಮಹಿಳೆ ಉಲ್ಟಾ ಬೆದರಿಕೆ ಹಾಕಿದ್ದಾಳೆ. ಉದ್ಯಮಿಯ ಹೊಸ ಕಚೇರಿಗೆ ನುಗ್ಗಿ ಮತ್ತಷ್ಟು ಹಣಕ್ಕಾಗಿ ಪೀಡಿಸಿರುವುದಲ್ಲದೆ, ಬೇಡಿಕೆ ಈಡೇರಿಸದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿದ್ದಾಳೆ. ಅಷ್ಟೇ ಅಲ್ಲದೆ, ಉದ್ಯಮಿಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ, ಅವರ ಹೆಂಡತಿ-ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಕೊಲ್ಲುವುದಾಗಿ ದಬಾಯಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ವ್ಯವಸ್ಥಿತ ಹನಿಟ್ರ್ಯಾಪ್ ಹಾಗೂ ಸುಲಿಗೆ ದಂಧೆಯಲ್ಲಿ ಸಬೀನಾ ಇಲ್ಯಾಸ್ ಸೇರಿದಂತೆ ಇನ್ನೂ ಕೆಲವರು ಭಾಗಿಯಾಗಿದ್ದು, ಇವರೆಲ್ಲರೂ ಸೇರಿ ಸಂಘಟಿತ ಆರ್ಥಿಕ ವಂಚನೆಯ ಜಾಲ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ಉದ್ಯಮಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಗಂಭೀರತೆ ಅರಿತ ಪಿಎಸ್ಐ ಭರತೇಶ್ ಕಂಕಣವಾಡಿ ನೇತೃತ್ವದ ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ, ಕಾಪು ತಾಲೂಕಿನ ನಾಡಸಾಲು ಗ್ರಾಮದ ಮಸೀದಿ ಮುಂಭಾಗದ ಕಂಚಿನಡ್ಕ ಎಂಬಲ್ಲಿ ಜುಲೈ 2 ರಂದು ಪ್ರಮುಖ ಆರೋಪಿ ಜೀನತ್ ಇಬ್ರಾಹಿಂಳನ್ನು ಅರೆಸ್ಟ್ ಮಾಡಿದೆ.
ಬಂಧಿತ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಆಳವಾದ ತನಿಖೆಗಾಗಿ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಖೆಡ್ಡಾ ಜಾಲಕ್ಕೆ ಬಿದ್ದು ಇನ್ನು ಯಾರಾದರೂ ಸಾರ್ವಜನಿಕರು ಅಥವಾ ಪ್ರಭಾವಿಗಳು ವಂಚನೆ, ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದರೆ, ಅಂಥವರು ಯಾವುದೇ ಭಯವಿಲ್ಲದೆ ತಕ್ಷಣವೇ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










