ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ವಿಶೇಷ ಕರ್ತವ್ಯಕ್ಕೆ (ಎಸ್ಐಆರ್) ನಿಯೋಜಿಸಿರುವುದರಿಂದ, ಸ್ಥಳೀಯ ಜನನ ಮತ್ತು ಮರಣಗಳ ನೋಂದಣಿ ವಿಭಾಗದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವುದನ್ನು ಇಡೀ ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಈ ಆದೇಶದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖಂಡರು, ಆಡಳಿತಾಧಿಕಾರಿಯ ಮೂಲಕ ಪಾಲಿಕೆಯನ್ನು ಮುನ್ನಡೆಸುತ್ತಿರುವ ಸರ್ಕಾರಕ್ಕೆ ಕರಾವಳಿಯಲ್ಲಿ ಒಂದು ತಿಂಗಳ ಕಾಲ ಜನನ-ಮರಣಗಳೇ ಸಂಭವಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಶಾಲಾ ಪ್ರವೇಶಾತಿಗಾಗಿ ಹೆಣಗಾಡುತ್ತಿರುವ ಪೋಷಕರು ಹಾಗೂ ತುರ್ತಾಗಿ ಪಾಸ್ಪೋರ್ಟ್ ಪಡೆಯಬೇಕಾದ ನಾಗರಿಕರು ಈ ನಿರ್ಧಾರದಿಂದ ಕಂಗಾಲಾಗಿದ್ದರು. ಕೊನೆಗೆ ಸಾರ್ವಜನಿಕರು ಆಕ್ರೋಶಗೊಂಡು ಶಾಸಕರಿಗೆ ದೂರು ನೀಡಲು ಮುಂದಾದಾಗ ಎಚ್ಚೆತ್ತ ಪಾಲಿಕೆ, ಅರ್ಜಿಗಳನ್ನೇನೋ ಸ್ವೀಕರಿಸಲು ಆರಂಭಿಸಿದೆ. ಆದರೆ, ಯಾವುದೇ ಕಾರಣಕ್ಕೂ ಪ್ರಮಾಣಪತ್ರಗಳನ್ನು ತುರ್ತಾಗಿ ನೀಡಲು ಸಾಧ್ಯವಿಲ್ಲ ಎಂಬ ನಿಬಂಧನೆ ವಿಧಿಸಿರುವುದು ಸಾರ್ವಜನಿಕರ ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಜನರಿಗೆ ಈ ಮಟ್ಟಿಗೆ ತೊಂದರೆ ನೀಡುತ್ತಿರುವ ಪಾಲಿಕೆಯು, ಇನ್ನು ಒಂದು ತಿಂಗಳ ಕಾಲ ಮಂಗಳೂರಿನ ನಾಗರಿಕರಿಂದ ಯಾವುದೇ ರೀತಿಯ ತೆರಿಗೆ ವಸೂಲಿ ಮಾಡುವುದಿಲ್ಲ ಎಂಬ ಬೋರ್ಡ್ ಅನ್ನಾದರೂ ಪ್ರದರ್ಶಿಸಲಿ ಎಂದು ಮುಖಂಡರು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನೇತೃತ್ವದ ಈ ಆಡಳಿತದಿಂದಾಗಿ ಸಾರ್ವಜನಿಕರು ತಮ್ಮ ನಿತ್ಯದ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಮಹಾನಗರ ಪಾಲಿಕೆಯ ಕಚೇರಿ ಮುಂದೆ ಗಂಟೆಗಟ್ಟಲೆ ಸಾಲು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗಳಲ್ಲಿ ವ್ಯವಸ್ಥಿತ ನಿರ್ವಹಣೆ ಇಲ್ಲದ ಕಾರಣ ಪ್ರತಿದಿನ ಸಾರ್ವಜನಿಕರು ಹಾಗೂ ಅಲ್ಲಿನ ಸಿಬ್ಬಂದಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದು, ತಕ್ಷಣವೇ ಈ ಗೊಂದಲಗಳಿಗೆ ಪೂರ್ಣವಿರಾಮ ಹಾಡಿ ನಾಗರಿಕರ ಕೆಲಸಗಳು ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪಾಲಿಕೆಗೆ ಎಚ್ಚರಿಕೆ ನೀಡಲಾಗಿದೆ.
ಮಂಗಳೂರು ನಗರದ ವ್ಯಾಪ್ತಿಯಲ್ಲಿ ಪ್ರಸ್ತುತ ಜಮೀನುಗಳ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯು ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದು, ಜನಸಾಮಾನ್ಯರು ಕಚೇರಿಗಳಿಗೆ ಅಲೆಯುವಂತಾಗಿದೆ. ಈ ಹಿಂದೆ ಕಂದಾಯ ಇಲಾಖೆಯ ಮೂಲಕ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಲಭವಾಗಿ ನಡೆಯುತ್ತಿದ್ದ ಈ ಕೆಲಸವನ್ನು ಸರ್ಕಾರವು ಈಗ ದಿಢೀರನೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವರ್ಗಾಯಿಸಿದೆ. ಈ ಮುಂಚೆ ಕಂದಾಯ ಇಲಾಖೆಯ ಸರ್ವೇಯರ್ಗಳು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಸಿದ್ಧಪಡಿಸಿಕೊಡುತ್ತಿದ್ದರು. ಅದರ ಆಧಾರದ ಮೇಲೆ ಸಾರ್ವಜನಿಕರು ತಾಲೂಕು ಕಚೇರಿಯಲ್ಲಿ ಸುಲಭವಾಗಿ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದರು.
ಆದರೆ ಪ್ರಸ್ತುತ, ಕನ್ವರ್ಷನ್ಗೆ ಅಗತ್ಯವಿರುವ ನಕ್ಷೆ ತಯಾರಿಸುವ ಸರ್ವೇಯರ್ಗಳು ಮತ್ತು ದಾಖಲೆಗಳನ್ನು ಕಂದಾಯ ಇಲಾಖೆಯಲ್ಲೇ ಉಳಿಸಿಕೊಂಡು, ಯಾವುದೇ ಪರ್ಯಾಯ ತಾಂತ್ರಿಕ ಸಿದ್ಧತೆಗಳಿಲ್ಲದೆ ಇಡೀ ಜವಾಬ್ದಾರಿಯನ್ನು ಮುಡಾಗೆ ವಹಿಸಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಸೂಕ್ತ ನಕ್ಷೆ ಇಲ್ಲದೆ ನಾವು ಭೂಪರಿವರ್ತನೆ ಮಾಡುವುದಿಲ್ಲ ಎಂದು ಮುಡಾ ಅಧಿಕಾರಿಗಳು ಹೇಳುತ್ತಿದ್ದರೆ, ಇತ್ತ ಸರ್ಕಾರದ ಆದೇಶದಂತೆ ನಕ್ಷೆ ಸಿದ್ಧಪಡಿಸಿಕೊಡಲು ನಮಗೆ ಅಧಿಕಾರವಿಲ್ಲ ಎಂದು ಕಂದಾಯ ಇಲಾಖೆಯವರು ಕೈಚೆಲ್ಲುತ್ತಿದ್ದಾರೆ. ಇದರಿಂದಾಗಿ ತುರ್ತು ಆರ್ಥಿಕ ಅಗತ್ಯಗಳಿದ್ದರೂ ಜಮೀನುಗಳ ಖರೀದಿ ಅಥವಾ ಮಾರಾಟ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಮುಡಾದಲ್ಲಿ ನಿತ್ಯದ ಕೆಲಸಗಳೇ ವಿಳಂಬವಾಗುತ್ತಿರುವಾಗ, ಈ ಹೆಚ್ಚುವರಿ ಗೊಂದಲ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ರಾಜ್ಯ ಸರ್ಕಾರದ ಇಂತಹ ಅವಿವೇಚನಾ ರಹಿತ ಮತ್ತು ಅಪಕ್ವ ನಿರ್ಧಾರಗಳಿಂದಾಗಿ ಮಂಗಳೂರಿನಲ್ಲಿ ಪ್ರಾಪರ್ಟಿ ಕಾರ್ಡ್, ಆರ್ಟಿಸಿ ಹಾಗೂ ಕನ್ವರ್ಷನ್ ಸೇರಿದಂತೆ ಎಲ್ಲ ಪ್ರಮುಖ ಕಂದಾಯ ದಾಖಲೆಗಳ ವಿತರಣೆ ಅಯೋಮಯವಾಗಿದೆ. ನಾಗರಿಕರು ಸರಳವಾಗಿ ಪಡೆಯಬೇಕಾಗಿದ್ದ ಅಗತ್ಯ ಪತ್ರಗಳಿಗಾಗಿ ತಿಂಗಳುಗಟ್ಟಲೆ ಕಚೇರಿಗಳ ಸುತ್ತ ಅಲೆಯುವ ದುಃಸ್ಥಿತಿ ಬಂದೊದಗಿದೆ. ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಸಮಯ ಸರ್ವರ್ ಕೈಕೊಡುತ್ತಿದ್ದು, ತಾಂತ್ರಿಕ ದೋಷಗಳ ಸರಣಿ ಮುಂದುವರಿಯುತ್ತಲೇ ಇದೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಸರ್ಕಾರ ಹಠಾತ್ ನಿಯಮಗಳನ್ನು ಹೇರುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪದೋಷಗಳನ್ನು ಸರಿಪಡಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಮತ್ತು ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಡಲದ ಪದಾಧಿಕಾರಿ ಮಂಗಳಾ ಆಚಾರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










