ಮಂಗಳೂರು : ಮಹಾನಗರ ಪಾಲಿಕೆಯ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ವಿಭಾಗದಲ್ಲಿ ಸದ್ಯ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ. ಸಿಬ್ಬಂದಿಯನ್ನು ಎಸ್ಐಆರ್ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಈ ವಿಭಾಗದ ಕೆಲಸಗಳು ಕುಂಠಿತಗೊಂಡಿದ್ದು, ಪ್ರಮಾಣ ಪತ್ರಗಳಿಗಾಗಿ ದೂರದ ಊರುಗಳಿಂದ ಬರುವ ಸಾರ್ವಜನಿಕರು ನಿತ್ಯ ಬರಿಗೈಲಿ ಮನೆಗೆ ಮರಳುವಂತಾಗಿದೆ.
ಸದ್ಯ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಶಾಲೆ-ಕಾಲೇಜುಗಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯವಾಗಿದೆ. ಇದರಿಂದಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳ ಪೋಷಕರು ಹಾಗೂ ಮೃತರ ವಾರಸುದಾರರು ಪ್ರಮಾಣ ಪತ್ರಕ್ಕಾಗಿ ಪಾಲಿಕೆಗೆ ಮುಗಿಬೀಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಈ ಸೇವೆ, ಈಗ ಕೇವಲ ಮಧ್ಯಾಹ್ನದವರೆಗೆ ಮಾತ್ರ ಲಭ್ಯವಿದೆ. ಮುಂಜಾನೆಯಿಂದಲೇ ವೃದ್ಧರು, ಮಹಿಳೆಯರು ಹಾಗೂ ಸಣ್ಣ ಮಕ್ಕಳನ್ನು ಎತ್ತಿಕೊಂಡ ತಾಯಂದಿರು ಕೌಂಟರ್ ಮುಂದೆ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ಅರ್ಜಿ ಸಲ್ಲಿಸಿದರೂ ತಕ್ಷಣಕ್ಕೆ ಪತ್ರ ಸಿಗುವುದಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.
ಸಾಮಾನ್ಯ ದಿನಗಳಲ್ಲಿ ಕೇವಲ ಎರಡರಿಂದ ಮೂರು ವಾರಗಳಲ್ಲಿ ಕೈಸೇರುತ್ತಿದ್ದ ಪ್ರಮಾಣ ಪತ್ರಗಳು, ಸದ್ಯ ತಿಂಗಳುಗಳೇ ಕಳೆದರೂ ವಿಲೇವಾರಿಯಾಗುತ್ತಿಲ್ಲ. ಸರ್ಟಿಫಿಕೇಟ್ ಸಿದ್ಧವಾದ ಬಳಿಕ ಮೊಬೈಲ್ಗೆ ಎಸ್ಎಂಎಸ್ ಕಳುಹಿಸಲಾಗುವುದು ಎಂದು ಪಾಲಿಕೆ ಹೇಳುತ್ತಿದೆಯಾದರೂ, ಯಾವುದೇ ಸಂದೇಶ ಬಾರದೆ ಜನ ರಶೀದಿ ಹಿಡಿದು ಕಚೇರಿಗೆ ಅಲೆಯುತ್ತಿದ್ದಾರೆ. ಕಚೇರಿಯಲ್ಲಿ ಈಗಾಗಲೇ ಸಾವಿರಾರು ಅರ್ಜಿಗಳು ಧೂಳು ಹಿಡಿಯುತ್ತಿದ್ದು ನಾಗರಿಕರ ಪರದಾಟ ಮುಂದುವರಿದಿದೆ.
ಅರ್ಜಿ ಸಲ್ಲಿಸಿದ ನಂತರ ಸಾರ್ವಜನಿಕರು ಪ್ರಮಾಣ ಪತ್ರ ಪಡೆಯಲು ಮತ್ತೆ ಕಚೇರಿಗೆ ಬರುವುದನ್ನು ತಪ್ಪಿಸಲು ಪೋಸ್ಟಲ್ (ಅಂಚೆ) ಮೂಲಕ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ನೋಟಿಸ್ ಬೋರ್ಡ್ನಲ್ಲಿ ಹಾಕಿಕೊಳ್ಳಲಾಗಿದೆ. ಆದರೆ ವಾಸ್ತವದಲ್ಲಿ ಈ ಅಂಚೆ ಸೇವೆ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಪ್ರಮಾಣ ಪತ್ರದ ಸ್ಥಿತಿ ತಿಳಿಯಲು ಸಾರ್ವಜನಿಕರು ಮತ್ತೆ ಮತ್ತೆ ಪಾಲಿಕೆ ಕಚೇರಿಯ ಮೆಟ್ಟಿಲು ಹತ್ತುವುದು ಅನಿವಾರ್ಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










