ಉಡುಪಿ : ಕಟಪಾಡಿ ಪರಿಸರದಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ಶನಿವಾರ ಮುಂಜಾನೆ ನಾಯಿಗಳ ಹಿಂಡು ಹಟ್ಟಿಗೆ ನುಗ್ಗಿ ಮೂಕಪ್ರಾಣಿಗಳನ್ನು ಬಲಿಪಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಭೀಕರ ದೃಶ್ಯದಿಂದಾಗಿ ಸದ್ಯ ಪೋಷಕರು ತಮ್ಮ ಸಣ್ಣ ಮಕ್ಕಳನ್ನು ಒಂಟಿಯಾಗಿ ಶಾಲೆಗೆ ಕಳುಹಿಸಲು ಕೂಡ ತೀವ್ರವಾಗಿ ಹಿಂಜರಿಯುವಂತಾಗಿದ್ದು, ಇಡೀ ಗ್ರಾಮದಲ್ಲಿ ಆತಂಕ ಮನೆಮಾಡಿದೆ.
ಕಟಪಾಡಿಯ ಅಚ್ಚಡ ಮಲೆ ಜುಮಾದಿ ದೈವಸ್ಥಾನದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಿಂಸೆ ವಿಪರೀತವಾಗಿದೆ. ಶನಿವಾರ ಮುಂಜಾನೆ ವೇಳೆ ಅಚ್ಚಡ ನಿವಾಸಿಯಾದ ನಿವೃತ್ತ ಶಿಕ್ಷಕ ವಿಠಲ ಶೇರಿಗಾರ್ ಅವರ ಮನೆಯ ಆವರಣಕ್ಕೆ ನಾಯಿಗಳ ಹಿಂಡು ದಾಳಿ ಇಟ್ಟಿದೆ. ವಿಠಲ ಶೇರಿಗಾರ್ ಅವರ ಪುತ್ರ ಪ್ರಶಾಂತ್ ಅವರು ತಮ್ಮ ಜೀವನೋಪಾಯಕ್ಕಾಗಿ ಮನೆಯಲ್ಲೇ ಸಾಕಿ ಸಲಹುತ್ತಿದ್ದ ಆಡುಗಳ ಕೊಟ್ಟಿಗೆಗೆ ನುಗ್ಗಿದ ನಾಯಿಗಳು, ಎರಡು ಸಣ್ಣ ಮರಿಗಳು ಸೇರಿದಂತೆ ಒಟ್ಟು ಐದು ಆಡುಗಳನ್ನು ಬರ್ಬರವಾಗಿ ಕಚ್ಚಿ ಕೊಂದಿವೆ.
ಈ ಹಠಾತ್ ದಾಳಿಯಿಂದಾಗಿ ಆಡುಗಳ ಮಾಲೀಕರಿಗೆ ಸಾವಿರಾರು ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ. ಕೇವಲ ಪ್ರಾಣಿ ಹಾನಿಯಷ್ಟೇ ಅಲ್ಲದೆ, ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಜನಸಾಮಾನ್ಯರು, ಮಹಿಳೆಯರು ಹಾಗೂ ವೃದ್ಧರು ಒಂಟಿಯಾಗಿ ನಡೆದಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸಮಯದಲ್ಲಿ ಮನುಷ್ಯರ ಮೇಲೂ ದಾಳಿ ನಡೆಯಬಹುದು ಎಂಬ ಕರಾಳ ಸತ್ಯವನ್ನು ಈ ಘಟನೆ ಸಾಬೀತುಪಡಿಸಿದೆ.
ಹಳ್ಳಿಗಳಲ್ಲಿ ಇಂತಹ ದೊಡ್ಡ ಮಟ್ಟದ ದುರಂತ ಸಂಭವಿಸಿದ್ದರೂ ಸ್ಥಳೀಯ ಆಡಳಿತ ವ್ಯವಸ್ಥೆ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಯಾವುದೇ ಜೀವಹಾನಿ ಅಥವಾ ಮಕ್ಕಳಿಗೆ ತೊಂದರೆಯಾಗುವ ಮುನ್ನವೇ ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಮತ್ತು ಈ ಅಪಾಯಕಾರಿ ಬೀದಿನಾಯಿಗಳ ಹಾವಳಿಗೆ ಶಾಶ್ವತ ಕಡಿವಾಣ ಹಾಕಬೇಕು ಎಂದು ಕಟಪಾಡಿ ನಾಗರಿಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










