ವಿಟ್ಲ : ಸೂರಿಕುಮೇರು ಪೆಟ್ರೋಲ್ ಬಂಕ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದಿಢೀರನೆ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನೊಳಗಿದ್ದ ಪುಟ್ಟ ಮಗು, ಮಹಿಳೆ ಹಾಗೂ ಚಾಲಕ ಹೊರಬರಲಾಗದೆ ವಾಹನದೊಳಗಡೆಯೇ ಸಿಲುಕಿಕೊಂಡು ಪರದಾಡುವಂತಾಯಿತು. ಈ ಭೀಕರ ದೃಶ್ಯವನ್ನು ಗಮನಿಸಿದ ತಕ್ಷಣವೇ ಸಮೀಪದಲ್ಲೇ ಗಸ್ತಿನಲ್ಲಿದ್ದ ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಎಸ್ಐ) ರಾಮಕೃಷ್ಣ ಹಾಗೂ ಅವರ ಸಿಬ್ಬಂದಿ ಕ್ಷಣಾರ್ಧದಲ್ಲೇ ಅಪಘಾತದ ಸ್ಥಳಕ್ಕೆ ದೌಡಾಯಿಸಿ ಸಾಹಸಿಕ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ತಮ್ಮ ಸಮಯಪ್ರಜ್ಞೆ ಹಾಗೂ ಅಪಾರ ಧೈರ್ಯವನ್ನು ಪ್ರದರ್ಶಿಸಿದ ಎಸ್ಐ ರಾಮಕೃಷ್ಣ ಅವರು ಅಪಾಯದಲ್ಲಿದ್ದ ಕುಟುಂಬವನ್ನು ಕಾರಿನಿಂದ ಸುರಕ್ಷಿತವಾಗಿ ಹೊರತೆಗೆದರು. ಭಯದಿಂದ ಅಳುತ್ತಿದ್ದ ಪುಟ್ಟ ಮಗುವನ್ನು ಎದೆಗೆ ಅಪ್ಪಿಕೊಂಡು ಸುರಕ್ಷಿತವಾಗಿ ಕರೆತಂದ ಅಪರೂಪದ ಮಾನವೀಯ ಕ್ಷಣ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಯೋಚಿತವಾಗಿ ಕಾರ್ಯಪ್ರವೃತ್ತರಾದ ಪರಿಣಾಮ ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಪೊಲೀಸ್ ಅಧಿಕಾರಿಯ ಈ ಅದ್ಭುತ ಸ್ಪಂದನೆಗೆ ಮುಕ್ತಕಂಠದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಈ ಭಾವುಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಧಿಕಾರಿ ರಾಮಕೃಷ್ಣ ಅವರ ಕಾರ್ಯವೈಖರಿಯನ್ನು ಕೊಂಡಾಡುತ್ತಿದ್ದಾರೆ. “ಇಂತಹ ಜನಸ್ನೇಹಿ ಅಧಿಕಾರಿಗಳೇ ಪೊಲೀಸ್ ಇಲಾಖೆಗೆ ನೈಜ ಹೆಮ್ಮೆ”, “ಸಮಯೋಚಿತ ನಿರ್ಧಾರದಿಂದ ಜೀವ ಉಳಿಸಿದ ಸಿಯಲ್ ಹೀರೋ” ಎಂದು ಸಾರ್ವಜನಿಕರು ಪ್ರಶಂಸೆಯ ಸುರಿಮಳೆ ಗೈಯುತ್ತಿದ್ದಾರೆ. ಎಸ್ಐ ರಾಮಕೃಷ್ಣ ಮತ್ತು ಸಿಬ್ಬಂದಿ ಕರುಣಾಕರ ಅವರ ಈ ಕ್ಷಿಪ್ರ ಕಾರ್ಯಾಚರಣೆ, ಕರ್ತವ್ಯನಿಷ್ಠೆ ಹಾಗೂ ಮಾನವೀಯತೆಯ ನಡೆ ಪೊಲೀಸ್ ಇಲಾಖೆಯ ಘನತೆಯನ್ನು ಹೆಚ್ಚಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










