ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಹಕ್ಕುಗಳ ಹೋರಾಟದ ಪಿತಾಮಹ, ಹಿರಿಯ ದಲಿತ ನಾಯಕ ಹಾಗೂ ಕರಾವಳಿಯ ಪ್ರಗತಿಪರ ಜನ ಚಳವಳಿಗಳ ಪ್ರಮುಖ ಹಾದಿದೀಪವಾಗಿದ್ದ ಎಂ. ದೇವದಾಸ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ (DSS) ಆರಂಭಗೊಂಡ ಆರಂಭಿಕ ದಿನಗಳಲ್ಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಘಟನೆಯ ಬೇರುಗಳನ್ನು ಗಟ್ಟಿಮಾಡಲು ದೇವದಾಸ್ ಅವರು ಅಪಾರ ಶ್ರಮ ವಹಿಸಿದ್ದರು. ಅವರ ಹಠಾತ್ ಅಗಲಿಕೆಯು ಕರಾವಳಿಯ ವೈಚಾರಿಕ ಹಾಗೂ ಸಾಮಾಜಿಕ ಹೋರಾಟದ ವಲಯದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.
ದಲಿತ ಸಮುದಾಯದಲ್ಲಿ ಆತ್ಮಗೌರವ, ಸಾಮಾಜಿಕ ಜಾಗೃತಿ ಹಾಗೂ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ ಸಂಘಟನೆಯನ್ನು ಶಕ್ತಿಯುತವಾಗಿ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಂಗಳೂರು ಭಾಗದಲ್ಲಿ ಎಡಪಂಥೀಯ ಸಂಘಟನೆಗಳು ಹಾಗೂ ಸಮಾನಮನಸ್ಕ ವೇದಿಕೆಗಳೊಂದಿಗೆ ಕೈಜೋಡಿಸಿ, ಶೋಷಿತರ ಪರವಾಗಿ ಅನೇಕ ಪ್ರಭಾವಿ ಪ್ರತಿಭಟನೆಗಳು ಮತ್ತು ಜಂಟಿ ಹೋರಾಟಗಳನ್ನು ಸಂಘಟಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ತಮ್ಮ ಸೈದ್ಧಾಂತಿಕ ಬದ್ಧತೆ ಹಾಗೂ ಸರಳತೆಯ ಮೂಲಕ ಯುವ ಹಾಗೂ ಹೊಸ ತಲೆಮಾರಿನ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು.
ಪ್ರಸ್ತುತ ಸಾಮಾಜಿಕ ಚಳವಳಿಗಳು ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿರುವ ಮತ್ತು ಸೌಹಾರ್ದತೆಗೆ ಧಕ್ಕೆ ಒದಗುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಪ್ರಖರ ವೈಚಾರಿಕ ನಿಲುವು ಹೊಂದಿದ್ದ ಎಂ. ದೇವದಾಸ್ ಅವರ ಅಗಲಿಕೆಯು ಜನಪರ ಚಳವಳಿಗಳಿಗೆ ಭರಿಸಲಾರದ ನಷ್ಟವಾಗಿದೆ. ದೇವದಾಸ್ ಅವರ ನಿಧನಕ್ಕೆ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಳವಾದ ಸಂತಾಪ ಸೂಚಿಸಿದ್ದು, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಶೋಕ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










