ಮಂಗಳೂರು : ಅಮೆರಿಕನ್ ಮಲ್ಟಿ ಎಥ್ನಿಕ್ ಕಮಿಷನ್ (AMEC) ನೀಡುವ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್ಶಿಪ್ ಅವಾರ್ಡ್’ (Global Civic Leadership Award) ಪುರಸ್ಕಾರಕ್ಕೆ ಪಾತ್ರರಾಗಿರುವ ನಾಯಕ, ಯು.ಟಿ. ಖಾದರ್ ಫರೀದ್ ಅವರು ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬುಧವಾರ ಸಂಜೆ ಮಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಜುಲೈ 25ರಂದು ಇಲಿನಾಯ್ಸ್ನ ನೇಪರ್ವಿಲ್ನಲ್ಲಿರುವ ಯೆಲ್ಲೋ ಬಾಕ್ಸ್ ಆಡಿಟೋರಿಯಂನಲ್ಲಿ ನಡೆಯಲಿರುವ 15ನೇ ವಾರ್ಷಿಕ ‘AMEC ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ-2026’ ಸಮಾರಂಭದಲ್ಲಿ ಈ ಜಾಗತಿಕ ಗೌರವವನ್ನು ಅವರಿಗೆ ಅಧಿಕೃತವಾಗಿ ಪ್ರದಾನ ಮಾಡಲಾಗುತ್ತದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರ, ಅಂತರ್ಗತ ಆಡಳಿತ, ಸಮಾಜ ಸೇವೆ ಹಾಗೂ ಸಮುದಾಯ ಕೇಂದ್ರಿತ ಅಭಿವೃದ್ಧಿಗಾಗಿ ಯು.ಟಿ. ಖಾದರ್ ಅವರು ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಸ್ವೀಕಾರದ ಜೊತೆಗೆ ಭಾರತ ಹಾಗೂ ಅಮೆರಿಕ ನಡುವಿನ ನಂಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಮಹತ್ವದ ಶೈಕ್ಷಣಿಕ, ವೈದ್ಯಕೀಯ ಹಾಗೂ ರಾಜತಾಂತ್ರಿಕ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಜುಲೈ 24ರಂದು ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಡೆಯಲಿರುವ “ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಭಾರತ-ಅಮೆರಿಕ ಸಿರಿಧಾನ್ಯ (ಮಿಲೆಟ್) ಪಾಲುದಾರಿಕೆ” ದುಂಡುಮೇಜಿನ ಸಭೆಯಲ್ಲಿ ಯು.ಟಿ. ಖಾದರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅದೇ ದಿನ ಚಿಕಾಗೋದ ಮಾಲ್ಕಮ್ ಎಕ್ಸ್ ಕಾಲೇಜಿನಲ್ಲಿರುವ ಪ್ರಮುಖ ರೋಬೋಟಿಕ್ ಹೊರರೋಗಿ ಚಿಕಿತ್ಸಾಲಯಕ್ಕೆ ಭೇಟಿ ನೀಡಲಿರುವ ಅವರು, ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಚಿಕಾಗೋ (UIC) ಹಾಗೂ ಇಲಿನಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞರೊಂದಿಗೆ ಡಿಜಿಟಲ್ ಮೆಡಿಸಿನ್ ಹಾಗೂ ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳ ಕುರಿತು ಸಂವಾದ ನಡೆಸಲಿದ್ದಾರೆ.
ಮುಂದಿನ ದಿನಗಳಲ್ಲಿ ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಆಹಾರ ವಿಜ್ಞಾನ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿರುವ ಅವರು, ಬಳಿಕ ವಾಷಿಂಗ್ಟನ್ ಡಿಸಿಗೆ ತೆರಳಿ ಪ್ರಮುಖ ಜಾಗತಿಕ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಮ್ಮ ಅಮೆರಿಕ ಪ್ರವಾಸವನ್ನು ಪೂರ್ಣಗೊಳಿಸಿ ಜುಲೈ 30ರಂದು ಅವರು ಬೆಂಗಳೂರಿಗೆ ಮರಳಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹೊಸ ಸುದ್ದಿಗಳು, ಸುದ್ದಿಗಳು










