ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಮದ್ಯದ ಜೊತೆಗೆ ಆಹಾರ ಪೂರೈಸುವ ಬಾರ್ ಹಾಗೂ ರೆಸ್ಟೋರೆಂಟ್ಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ರಾತ್ರಿ ಮಿಂಚಿನ ದಾಳಿ ನಡೆಸಿದೆ. ಕಾರ್ಯಚರಣೆಯ ವೇಳೆ ಬಾರ್ಗಳಲ್ಲಿದ್ದ ಗ್ರಾಹಕರ ಗುರುತಿನ ಚೀಟಿಗಳನ್ನು (ID Cards) ಕೂಲಂಕುಷವಾಗಿ ತಪಾಸಣೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಬಾರದು ಅಥವಾ ಪೂರೈಸಬಾರದು ಎಂದು ಬಾರ್ ಮಾಲೀಕರು ಹಾಗೂ ಸನ್ನದುದಾರರಿಗೆ ಖಡಕ್ ಸೂಚನೆ ನೀಡಿದ ಅಧಿಕಾರಿಗಳು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಿಢೀರ್ ಕಾರ್ಯಾಚರಣೆಯ ನೇತೃತ್ವವನ್ನು ಮಂಗಳೂರು ಉಪವಿಭಾಗ-1ರ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ವಹಿಸಿದ್ದರು. ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ, ದತ್ತಗುರು, ಉಪನಿರೀಕ್ಷಕರಾದ ರಜಾಕ್, ಜಯಪ್ಪ ಹಾಗೂ ಸಿಬ್ಬಂದಿಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ ಮತ್ತು ದೇವರಾಜ್ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










