ಮಂಗಳೂರು : ನೀರುಮಾರ್ಗ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತದ ವತಿಯಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಬ್ರಹ್ಮಣ್ಯ ನಗರ ನೀರುಮಾರ್ಗ ಇವುಗಳ ಜಂಟಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಕದ್ರಿಯ ಮಂಗಳ ಕಿಡ್ನಿ ಫೌಂಡೇಶನ್ನ ನುರಿತ ವೈದ್ಯರ ತಂಡವು ಸಾರ್ವಜನಿಕರ ತಪಾಸಣೆ ನಡೆಸಿತು.
ಸುಬ್ರಹ್ಮಣ್ಯ ಭಜನಾ ಮಂಡಳಿ ಸಭಾಭವನದಲ್ಲಿ ನಡೆದ ಈ ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಘವು ನಡೆಸುತ್ತಿರುವ ಈ 113ನೇ ಉಚಿತ ವೈದ್ಯಕೀಯ ಶಿಬಿರದ ಕಾರ್ಯ ಶ್ಲಾಘನೀಯವಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯದ ಅಧ್ಯಕ್ಷ ಲಯನ್ ರಾಮನಾಥ್ ಗಡಿಯಾರ್ ಮಾತನಾಡಿ, ಆತ್ಮಶಕ್ತಿ ಸಂಘದೊಂದಿಗೆ ಸೇರಿ ಆಯೋಜಿಸುತ್ತಿರುವ ಆರೋಗ್ಯ ಶಿಬಿರಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ಮುಂದೆಯೂ ಇಂತಹ ಜಂಟಿ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆಶಿಸಿದರು. ಮಂಗಳ ಕಾಲೇಜಿನ ಉಪನ್ಯಾಸಕಿ ವಿಜೇತಾ ಶೆಟ್ಟಿ ಶಿಬಿರದ ಸೇವೆಗಳು ಹಾಗೂ ಆರೋಗ್ಯ ಜಾಗೃತಿಯ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘವು ಕಳೆದ 14 ವರ್ಷಗಳಿಂದ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸದಸ್ಯರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದರು. ಸಾಮಾಜಿಕ ಬದ್ಧತೆಯ ಭಾಗವಾಗಿ ನೀರುಮಾರ್ಗ ಪರಿಸರದಲ್ಲಿ ಬಡ ಸದಸ್ಯರ ಮನೆಗಳ ನವೀಕರಣವನ್ನೂ ಮಾಡಲಾಗಿದೆ. ವಾಹನ ಹಾಗೂ ಆರೋಗ್ಯ ವಿಮೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಆರೋಗ್ಯ ವಿಮೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ತುರ್ತು ಸಮಯದಲ್ಲಿ ಜೀವ ರಕ್ಷಿಸುವ ಸಿ.ಪಿ.ಆರ್ (CPR) ಪ್ರಥಮ ಚಿಕಿತ್ಸೆಯ ಬಗ್ಗೆ ಮಂಗಳ ಆಸ್ಪತ್ರೆಯ ವೈದ್ಯಕೀಯ ತಂಡ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕ ಗೋಪಾಲ ಎಂ., ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಲಯನ್ ನರಸಿಂಹ ಪೈ, ನಿಕಟಪೂರ್ವ ವಲಯ ಅಧ್ಯಕ್ಷ ಲಯನ್ ಶೀನಾ ಪೂಜಾರಿ, ಸುಬ್ರಹ್ಮಣ್ಯ ಭಜನಾ ಮಂಡಳಿಯ ಕಾರ್ಯದರ್ಶಿ ಪ್ರಮೀಳಾ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಸತೀಶ ಪೂಜಾರಿ ಹಾಗೂ ಮಂಗಳ ಕಾಲೇಜಿನ ಪಿ.ಆರ್.ಒ ವಿಜೇಶ್ ಉಪಸ್ಥಿತರಿದ್ದರು. ಸಂಘದ ಸಹಾಯಕ ಪ್ರಬಂಧಕ ವಿಶ್ವನಾಥ್ ಸ್ವಾಗತಿಸಿ, ಪ್ರಭಾರ ಶಾಖಾಧಿಕಾರಿ ವರುಣರಾಜ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಾಖಾಧಿಕಾರಿ ಹರಿಣಾಕ್ಷಿ ಧನ್ಯವಾದ ಸಮರ್ಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









