ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ (SCDCC) 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸರ್ವತೋಮುಖ ವ್ಯವಹಾರಿಕ ಪ್ರಗತಿ ಹಾಗೂ ಮಹತ್ತರ ಸಾಧನೆಯನ್ನು ಗುರುತಿಸಿ “ಸಾಧನಾ ಪ್ರಶಸ್ತಿ 2025-26” ನೀಡಿ ಗೌರವಿಸಲಾಯಿತು. ದಿನಾಂಕ 22.08.2026 ರಂದು ನಡೆದ ಸಮಾರಂಭದಲ್ಲಿ ಎಸ್ಸಿಡಿಸಿಬಿ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು, ಆತ್ಮಶಕ್ತಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
2012ರಲ್ಲಿ ಸ್ಥಾಪನೆಗೊಂಡ ಆತ್ಮಶಕ್ತಿ ಸಹಕಾರಿ ಸಂಘವು ತನ್ನ ದಶಮಾನೋತ್ಸವದ ನೆನಪಿಗಾಗಿ ನಗರದ ಪಡೀಲ್ನಲ್ಲಿ ಸ್ವಂತ ಪ್ರಧಾನ ಕಚೇರಿಯನ್ನು ನಿರ್ಮಿಸಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ 35 ಶಾಖೆಗಳನ್ನು ಹೊಂದಿರುವ ಈ ಸಂಸ್ಥೆಯು 2025-26ನೇ ಸಾಲಿನಲ್ಲಿ 179.28 ಲಕ್ಷ ರೂಪಾಯಿ ಷೇರು ಬಂಡವಾಳ ಹಾಗೂ 30,531.54 ಲಕ್ಷ ರೂಪಾಯಿ ಠೇವಣಿ ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ 27,884.33 ಲಕ್ಷ ರೂಪಾಯಿ ಸಾಲ ವಿತರಣೆ ಮಾಡಿದ್ದು, 32,317.19 ಲಕ್ಷ ರೂಪಾಯಿ ದುಡಿಯುವ ಬಂಡವಾಳದೊಂದಿಗೆ 308.58 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿ ಅತ್ಯುತ್ತಮ ಪ್ರಗತಿ ಸಾಧಿಸಿದೆ.
ಈ ವೈಭವೋಪೇತ ಕಾರ್ಯಕ್ರಮದಲ್ಲಿ ಎಸ್ಸಿಡಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ಟಿ.ಜಿ. ರಾಜಾರಾಮ ಭಟ್, ಎಂ. ವಾದಿರಾಜ್ ಶೆಟ್ಟಿ, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಎಂ. ಮಹೇಶ್ ಹೆಗ್ಡೆ, ಬಿ. ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಕುಶಾಲಪ್ಪ ಗೌಡ ಪಿ., ಎಸ್. ಎನ್. ಮನ್ಮಥ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಸದಾಶಿವ ಉಳ್ಳಾಲ್, ವೃತ್ತಿಪರ ನಿರ್ದೇಶಕ ರಾಜೇಶ್ ರಾವ್, ಪ್ರಭಾರ ಸಿಇಒ ಗೋಪಾಲಕೃಷ್ಣ ಭಟ್ ಕೆ. ಹಾಗೂ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಹೆಚ್.ಎನ್. ರಮೇಶ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್. ಉಪಸ್ಥಿತರಿದ್ದರು. ಅಲ್ಲದೆ ಆತ್ಮಶಕ್ತಿ ಸಂಸ್ಥೆಯ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರುಗಳಾದ ಪರಮೇಶ್ವರ ಜಿ. ಪೂಜಾರಿ, ಆನಂದ ಎಸ್. ಕೊಂಡಾಣ, ಗೋಪಾಲ್ ಎಮ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಂಸ್ಥೆಯು ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸತತ 8 ಬಾರಿ ‘ಉತ್ತಮ ಸಹಕಾರಿ ಸಂಘ’ ರಾಜ್ಯ ಪ್ರಶಸ್ತಿ ಪಡೆದಿರುವುದಲ್ಲದೆ, ಇ-ಸ್ಟಾಂಪಿಂಗ್ ಸೇವೆಗೆ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಿಂದ ಸತತ 10 ವರ್ಷ ಪ್ರಶಸ್ತಿ, ಗುರಿ ಮೀರಿದ ಸಾಧನೆಗೆ ಸತತ 10 ವರ್ಷ ‘ವಿಮಾ ಪ್ರಶಸ್ತಿ’, 2019ರ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ಯುವವಾಹಿನಿಯ ‘ಸಾಧನಶ್ರೇಷ್ಠ ಪ್ರಶಸ್ತಿ’ ಹಾಗೂ ಹೊಸದಿಲ್ಲಿಯ ಇಕೋನಾಮಿಕ್ ಗ್ರೋತ್ ಫೌಂಡೇಶನ್ನಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇವೆಲ್ಲವುಗಳ ನಡುವೆ ಎಸ್ಸಿಡಿಸಿ ಬ್ಯಾಂಕಿನಿಂದ ಸತತ 11ನೇ ಬಾರಿಗೆ ‘ಸಾಧನಾ ಪ್ರಶಸ್ತಿ’ ಪಡೆದಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ.
ಅಧ್ಯಕ್ಷ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ಸಮರ್ಥ ನಾಯಕತ್ವದಲ್ಲಿ ಸಂಸ್ಥೆಯು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸೇವೆಗೆ ವಿಶೇಷ ಒತ್ತು ನೀಡಿದೆ. ಸಂಸ್ಥೆಯಲ್ಲಿ ಶೇ. 100 ರಷ್ಟು ಹಿಂದುಳಿದ ವರ್ಗದ ಸಿಬ್ಬಂದಿಗಳಿದ್ದು, ಅದರಲ್ಲಿ ಶೇ. 95 ರಷ್ಟು ಮಹಿಳೆಯರೇ ಕಾರ್ಯಾಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಾಮಾಜಿಕ ಕಳಕಳಿಯ ಭಾಗವಾಗಿ 113ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರ ಆಯೋಜಿಸಿ, 950ಕ್ಕೂ ಅಧಿಕ ಕಣ್ಣಿನ ಕ್ಯಾಟ್ರಾಕ್ಟ್ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ (21,000+) ಹಾಗೂ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಕಾರ್ಡ್ ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಕೊಡುಗೆ ನೀಡುತ್ತಿರುವ ಸಂಸ್ಥೆಯು, ಬಡ ವಿದ್ಯಾರ್ಥಿಗಳ ಕಾಲೇಜು ಮತ್ತು ಪರೀಕ್ಷಾ ಶುಲ್ಕ ಭರಿಸುವುದು, ವಿದ್ಯಾರ್ಥಿವೇತನ ನೀಡುವುದು ಹಾಗೂ ಕಳೆದ 12 ವರ್ಷಗಳಿಂದ ಉಚಿತ ಪ್ರೇರಣಾ ಶಿಬಿರಗಳ ಮೂಲಕ ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









