ಮಂಗಳೂರು : ಮಂಗಳೂರಿನ ಬಿರುವೆರ್ ಕುಡ್ಲ ಸಂಘಟನೆಯ ಆಶ್ರಯದಲ್ಲಿ ನಗರದ ಪ್ರಮುಖ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಎಂಬತ್ತನೆಯ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಧ್ವಜಾರೋಹಣ ಸಮಾರಂಭದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದೇಶದ ಸ್ವತಂತ್ರಕ್ಕಾಗಿ ಅಹಿಂಸಾತ್ಮಕ ಹಾಗೂ ಕ್ರಾಂತಿಕಾರಿ ಹೋರಾಟ ನಡೆಸಿ ಲಕ್ಷಾಂತರ ವೀರರು ಪ್ರಾಣಾರ್ಪಣೆ ಮಾಡಿದ್ದಾರೆ, ಅವರ ತ್ಯಾಗದ ಫಲವಾಗಿಯೇ ಇಂದು ನಾವೆಲ್ಲರೂ ಈ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಲ್ಲಿ ಭಾರತವು ಅಮೃತ ಕಾಲದತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯೂ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇದೇ ವೇಳೆ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್ ಅವರ ನೇತೃತ್ವದಲ್ಲಿ ಕಷ್ಟದಲ್ಲಿರುವವರಿಗೆ ನೆರವು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಿರುವೆರ್ ಕುಡ್ಲ ಸಂಘಟನೆಯ ಸಮಾಜಮುಖಿ ಕಾರ್ಯಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕಾರ್ಕಳದ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮಾತನಾಡಿ, ಮಹಾತ್ಮರ ಬಲಿದಾನಗಳನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉದಯ ಪೂಜಾರಿ ಬಳ್ಳಾಲ್ಬಾಗ್, ರಾಕೇಶ್ ಪೂಜಾರಿ ಬಳ್ಳಾಲ್ಬಾಗ್, ಪ್ರವೀಣ್ ಸುವರ್ಣ ಬಗಂಬಿಲ, ಜೀತೇಶ್ ಜೈನ್, ದರ್ಶನ್ ಜೈನ್, ಲತೀಶ್ ಬಳ್ಳಾಲ್ಬಾಗ್, ಸಹನಾ ಕುಂದರ್, ವಿದ್ಯಾ ರಾಕೇಶ್, ಲೋಹಿತ್ ಗಟ್ಟಿ, ಧನರಾಜ್ ಚಿಲಿಂಬಿ, ಮನೋಜ್ ಶೆಟ್ಟಿ, ವಸಂತ್ ಪೂಜಾರಿ, ಪ್ರಮೋದ್ ಬಳ್ಳಾಲ್ಬಾಗ್, ಕಿಶೋರ್ ಬಾಬು, ರೆನಿತ್ ರಾಜ್, ರಾಕೇಶ್ ಚಿಲಿಂಬಿ, ಗಿರೀಶ್ ಬತ್ತೇರಿ, ಅಶ್ವಿನ್ ಚಿಲಿಂಬಿ, ಗಣೇಶ್ ಚಿಲಿಂಬಿ ಮತ್ತು ಮಹೇಶ್ ಚಿಲಿಂಬಿ ಸೇರಿದಂತೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









