ಸುಳ್ಯ : ರೋಟರಿ ಕ್ಲಬ್ ಬ್ರಹ್ಮಾವರ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್ಕೆಪಿಎ) ಬ್ರಹ್ಮಾವರ ವಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯದ ಶಾಂತಲಾ ಸ್ಟುಡಿಯೋ ಮಾಲಕ ಲೋಕೇಶ್ ಬಿ.ಎನ್. ಅವರಿಗೆ ಆಗಸ್ಟ್ 18ರಂದು ಪ್ರತಿಷ್ಠಿತ “ಛಾಯಾರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಏನೆಕಲ್ಲು ಗ್ರಾಮದ ಬಳ್ಳಡ್ಕ ಬಿ. ನಾರಾಯಣ ಗೌಡ ಹಾಗೂ ವೇದಾವತಿ ದಂಪತಿಯ ಪುತ್ರರಾದ ಲೋಕೇಶ್ ಅವರು ಕಳೆದ ನಾಲ್ಕು ದಶಕಗಳಿಂದ ಛಾಯಾಗ್ರಹಣ, ಸಮಾಜಸೇವೆ ಮತ್ತು ಸಂಘಟನಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಸನದಲ್ಲಿ ತಮ್ಮ ಭಾವ ಚಿನ್ನಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತಿಯ ಮೂಲಪಾಠ ಕಲಿತ ಅವರು, 1992ರಲ್ಲಿ ಸುಬ್ರಹ್ಮಣ್ಯದಲ್ಲಿ ‘ಶಾಂತಲಾ ಸ್ಟುಡಿಯೋ ಅಂಡ್ ವಿಡಿಯೋ’ ಸ್ಥಾಪಿಸುವ ಮೂಲಕ ವೃತ್ತಿಪರ ಛಾಯಾಗ್ರಾಹಕರಾಗಿ ಪ್ರಯಾಣ ಆರಂಭಿಸಿದರು.
ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದ ಇಂದಿನ ಆಧುನಿಕ ಡಿಜಿಟಲ್ ತಂತ್ರಜ್ಞಾನದವರೆಗೆ ನಿರಂತರವಾಗಿ ಅಳವಡಿಸಿಕೊಳ್ಳುತ್ತಾ ಬಂದಿರುವ ಇವರು, ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಸ್ಥಳೀಯ ಪತ್ರಿಕಾ ವರದಿಗಳಲ್ಲಿ ಪ್ರಕಟವಾಗುವ ಬಹುತೇಕ ಛಾಯಾಚಿತ್ರಗಳು ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದವುಗಳಾಗಿವೆ. ಛಾಯಾಗ್ರಾಹಕರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಇವರು ಎಸ್ಕೆಪಿಎ ಸುಳ್ಯ ವಲಯದ ಅಧ್ಯಕ್ಷರಾಗಿ ಹಾಗೂ 2021ರಿಂದ 2023ರವರೆಗೆ ಮಂಗಳೂರು-ಉಡುಪಿ ಅವಳಿ ಜಿಲ್ಲೆಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಛಾಯಾಗ್ರಾಹಕರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಛಾಯಾಗ್ರಹಣದ ಜತೆಗೆ ಪತ್ರಿಕೋದ್ಯಮದಲ್ಲೂ ಸಕ್ರಿಯರಾಗಿರುವ ಇವರು, ಕಳೆದ ಎರಡೂವರೆ ದಶಕಗಳಿಂದ ‘ಪ್ರಜಾವಾಣಿ’ ದಿನಪತ್ರಿಕೆಯ ಸುಬ್ರಹ್ಮಣ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ದಶಕಗಳಿಂದ ರಾಜ್ಯದ ಹಲವು ಪ್ರಮುಖ ಪತ್ರಿಕೆಗಳಿಗೆ ಪತ್ರಿಕಾ ಛಾಯಾಗ್ರಾಹಕರಾಗಿ ಕೊಡುಗೆ ನೀಡಿದ್ದಾರೆ. ಸುಬ್ರಹ್ಮಣ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿರುವ ಇವರು, ಪ್ರಸ್ತುತ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಸಾರ್ವಜನಿಕ ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಅಖಿಲ ಭಾರತ ಅಯ್ಯಪ್ಪ ದೀಪೋತ್ಸವ ಸಮಿತಿಗಳ ಅಧ್ಯಕ್ಷರಾಗಿ, ಕುಕ್ಕೆ ಶ್ರೀ ಜೆಸೀಸ್ ಅಧ್ಯಕ್ಷರಾಗಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ನ ಸ್ಥಾಪಕ ಸದಸ್ಯ ಹಾಗೂ ಅಧ್ಯಕ್ಷರಾಗಿ, ರೋಟರಿ ಝೋನಲ್ ಲೆಫ್ಟಿನೆಂಟ್ ಮತ್ತು ಲಯನ್ಸ್ ಕ್ಲಬ್ ಸದಸ್ಯರಾಗಿ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









